ಪುತ್ತೂರು: 2019ರ ಸೆಪ್ಟೆಂಬರ್ 3ರಂದು ಸಂಪ್ಯದ ಗಣೇಶೋತ್ಸವ ಪೆಂಡಾಲ್‌ನಲ್ಲಿ ನಡೆದಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಮೇಲಿನ ಕೊಲೆ ಆರೋಪ ಸಾಬೀತಾಗಿದ್ದು, ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೆಪ್ಟೆಂಬರ್ 22ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳಾದ ಪ್ರೀತೇಶ್ (ಎ1) ಹಾಗೂ ಕಿರಣ್ (ಎ3) ಮೇಲಿನ ಕೊಲೆ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದೆ.

ಪ್ರಕರಣದ ವಿವರ:ಪ್ರಕರಣದಲ್ಲಿ ಪೊಲೀಸರು ಪ್ರೀತೇಶ್, ಚರಣ್ ರಾಜ್, ಕಿರಣ್ ಹಾಗೂ ಆಶ್ರಯ ನೀಡಿದ ಆರೋಪದಲ್ಲಿದ್ದ ಸ್ಟೀವನ್ ಮೊಂತೇರೊ ಅವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಸ್ಟೀವನ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. ಇನ್ನು 2ನೇ ಆರೋಪಿ ಚರಣ್‌ರಾಜ್ ನನ್ನು 2022ರ ಜೂನ್ 4ರಂದು ಪೆರ್ಲಂಪಾಡಿಯಲ್ಲಿ ದುಷ್ಕರ್ಮಿಗಳ ತಂಡವೊಂದು ಹತ್ಯೆ ಮಾಡಿತ್ತು. ಇದೀಗ ಉಳಿ ದ ಇಬ್ಬರು ಆರೋಪಿಗಳು ದೋಷಿಗಳೆಂದು ಸಾಬೀತಾಗಿದ್ದು, ಸೆ.22ರಂದು ಶಿಕ್ಷೆಯ ವಿವರ ಹೊರಬೀಳಲಿದೆ.


