ಬೆಳ್ತಂಗಡಿ: ನೆರಿಯ ಗ್ರಾಮದ ಮುಚ್ಚರಾಳಿ ಎಂಬಲ್ಲಿ ಕಾಡುಹಂದಿಯನ್ನು ಬೇಟೆಯಾಡಿ, ಮಾಂಸ ಮಾಡಿ ಮನೆಯ ಫ್ರೀಜ್ಜ್ ನಲ್ಲಿ ದಾಸ್ತಾನು ಮಾಡಿಟ್ಟಿದ್ದ ಪ್ರಕರಣವನ್ನು ಬೆಳ್ತಂಗಡಿ ಅರಣ್ಯ ಇಲಾಖೆ ಪತ್ತೆಹಚ್ಚಿದೆ.
ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಸೆ.20 ರಂದು ಮಧ್ಯಾಹ್ನ ಸುಮಾರು 2:30 ರ ಸಮಯಕ್ಕೆ ನಡೆಸಿದ ಕಾರ್ಯಾಚರಣೆಯಲ್ಲಿ ಕಾಡುಹಂದಿ ಬೇಟೆಯಾಡಿದ ಆರೋಪದ ಮೇಲೆ ನೆರಿಯ ಗ್ರಾಮದ ಮುಚ್ಚಳ್ಳಿ ನಿವಾಸಿ
ಕುಕ್ಕಪ್ಪ ಗೌಡ ಮಗ ಸುರೇಶ್ ಎಂ.ಕೆ. (38) ಎಂಬಾತನನ್ನು ಬಂಧನ ಮಾಡಲಾಗಿದೆ. ಬೇಟೆ ಮಾಡಿದ 6 ಕೆ.ಜಿ 100 ಗ್ರಾಂ ಕಾಡುಹಂದಿ ಮಾಂಸ, ಒಂದು ಕೋವಿ, ಕತ್ತಿ, ತೂಕ ಮಾಪನ ಸೇರಿದಂತೆ ವಿವಿಧ ಸೊತ್ತುಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಸೆ.21 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮಹೇಶ್ ಎಂ. ದೇವಡಿಗ ಮಾರ್ಗದರ್ಶನದಲ್ಲಿ ನೆರಿಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ರವಿಚಂದ್ರ,ಉಪ ವಲಯ ಅರಣ್ಯಾಧಿಕಾರಿಗಳಾದ ಕಮಲ, ದೀಪಾ ವಿ. ಗಡಗಿ, ರಂಜಿತ್ ಕುಮಾರ್ ಎಸ್., ಪಿ.ಜಿ. ನಾಗೇಶ್ ಗೌಡ ಹಾಗೂ ಗಸ್ತು ಅರಣ್ಯ ಪಾಲಕ ವಿರೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.


