ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ 51 ವರ್ಷಗಳ ಕಾಲ ಒಂದಾಗಿ ಬಾಳಿದ ದಂಪತಿ, ಇಳಿವಯಸ್ಸಿನಲ್ಲಿ ವಿಚ್ಛೇದನಕ್ಕೆ ನಿಂತಿದ್ದರು. 75 ವರ್ಷದ ವೃದ್ಧ ಮತ್ತು 70 ವರ್ಷದ ಆತನ ಪತ್ನಿ, ಒಂದೇ ಊರಲ್ಲಿದ್ದರೂ ಪರಸ್ಪರ ಮುಖ ನೋಡದಷ್ಟು ದೂರವಾಗಿದ್ದರು.
ನಾಲ್ಕು ಜನ ಗಂಡು ಮಕ್ಕಳಿದ್ದರೂ, ತಂದೆ-ತಾಯಿಯನ್ನು ಆಸ್ತಿಯಂತೆ ಹಂಚಿಕೊಂಡಿದ್ದರು. ಇಬ್ಬರು ಮಕ್ಕಳು ವಕೀಲರು, ಇನ್ನುಬ್ಬರು ವ್ಯಾಪಾರಿಗಳು. ತಾಯಿಯನ್ನು ಇಬ್ಬರು ಮಕ್ಕಳು, ತಂದೆಯನ್ನು ಇನ್ನುಬ್ಬರು ಮಕ್ಕಳು ಕರೆದುಕೊಂಡು ಹೋದರು. ಪರಿಣಾಮ, ದಶಕಗಳ ಕಾಲ ಜೊತೆಯಾಗಿದ್ದ ದಂಪತಿ ನಡುವೆ ಮಾತುಕತೆಯೇ ಬಂದ್ ಆಯ್ತು.
ಇತ್ತೀಚೆಗೆ ಪತ್ನಿಗೆ ಹುಷಾರಿಲ್ಲದೆ ಔಷಧಿಗೆ ಹಣ ಕೇಳಿದಾಗ, ಪತಿ ಕೊಡಲ್ಲ ಅಂದರು. ಆ ಸಣ್ಣ ಜಗಳ ಕೊನೆಗೆ ಬುಲಂದ್ಶಹರ್ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿತು. ವಿಚಾರ ತಿಳಿದ ಪೊಲೀಸರು ಇಬ್ಬರನ್ನೂ ಕುಳ್ಳಿರಿಸಿ ಕೌನ್ಸೆಲಿಂಗ್ ನಡೆಸಿದರು.
ಕೊನೆಗೆ ಪತಿ, ಪತ್ನಿಗೆ ಪ್ರತಿ ತಿಂಗಳು 5,000 ರೂಪಾಯಿ ಕೊಟ್ಟು ಪ್ರೀತಿಯಿಂದ ನೋಡಿಕೊಳ್ಳಲು ಒಪ್ಪಿಕೊಂಡರು. ಪೊಲೀಸರ ಈ ಮುತುವರ್ಜಿಯಿಂದಾಗಿ, ಮುರಿದು ಬೀಳಬೇಕಿದ್ದ 51 ವರ್ಷಗಳ ವೃದ್ಧ ದಾಂಪತ್ಯ ಇಂದು ಮತ್ತೆ ಒಂದಾಗಿದೆ.


