ಪುತ್ತೂರು:ಪತಿಯಿಂದ ಹಲ್ಲೆಗೊಳಗಾಗಿದ್ದ ಮಹಿಳೆಯ ನೆರವಿಗೆ ತೆರಳಿದ್ದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಸಿಬ್ಬಂದಿಗಳ ಮೇಲೆ ಆರೋಪಿ ಹಾಗೂ ಆತನ ಕುಟುಂಬಸ್ಥರು ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಪಡ್ನೂರು ಗ್ರಾಮದ ಮುಂಡಾಜೆಯಲ್ಲಿ ನಡೆದಿದೆ.
ದೂರು ಸ್ವೀಕರಿಸಿ ಸ್ಥಳಕ್ಕೆ ತೆರಳಿದ್ದ ಹೊಯ್ಸಳ ವಾಹನದ ಸಿಬ್ಬಂದಿಗಳಾದ ಹೆಚ್.ಸಿ. ಮಧು ಹಾಗೂ ಸಿ.ಪಿ.ಸಿ. ಭೀಮನ ಗೌಡ ಎಂ. ಬಿರಾದರ್ ಅವರ ಮೇಲೆ ಈ ಹಲ್ಲೆ ನಡೆದಿದೆ. ಸ್ಥಳದಲ್ಲಿ ಮಹಿಳೆಗೆ ಮತ್ತೆ ಹಲ್ಲೆ ನಡೆಸಲು ಯತ್ನಿಸಿದ ಪತಿ ನವೀನ್ನನ್ನು ತಡೆಯಲು ಹೋದಾಗ, ನವೀನ್, ಆತನ ತಾಯಿ ಹಾಗೂ ಸಹೋದರ ಸೇರಿ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ (ಅ.ಕ್ರ: 107/2026, BNS 2023ರ ಅಡಿಯಲ್ಲಿ) ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಆರೋಪಿ ನವೀನ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಯ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


