ಮೂಡುಬಿದಿರೆ: ಜಾಗತಿಕ ಪಾವತಿ ತಂತ್ರಜ್ಞಾನ ಕಂಪನಿ ‘ವೀಸಾ’ದಲ್ಲಿ (Visa) ಹಾವೇರಿ ಜಿಲ್ಲೆಯ ಹತ್ತಿಮತ್ತೂರು ಗ್ರಾಮದ ರೈತನ ಮಗಳು ಸೃಷ್ಟಿ ಮಂಜುನಾಥ್ ಉಳ್ಳಾಗಡ್ಡಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಆಯ್ಕೆಯಾಗಿದ್ದು, ವಾರ್ಷಿಕ ₹46.33 ಲಕ್ಷದ ಬೃಹತ್ ಪ್ಯಾಕೇಜ್ ಪಡೆದುಕೊಂಡಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ನ (AIET) ಅಂತಿಮ ವರ್ಷದ ಮಾಹಿತಿ ವಿಜ್ಞಾನದ ವಿದ್ಯಾರ್ಥಿನಿಯಾಗಿರುವ ಸೃಷ್ಟಿ, 6ನೇ ಸೆಮಿಸ್ಟರ್ನಲ್ಲಿ ವೀಸಾ ಕಂಪನಿಯಲ್ಲಿ 10 ವಾರಗಳ ಇಂಟರ್ನ್ಶಿಪ್ ಮಾಡಿದ್ದರು. ಆ ವೇಳೆ ಮಾಸಿಕ ₹90 ಸಾವಿರ ಸ್ಟೈಫಂಡ್ ಪಡೆದಿದ್ದ ಇವರು, ತಮ್ಮ ಅತ್ಯುತ್ತಮ ಕಾರ್ಯಕ್ಷಮತೆಯಿಂದಾಗಿ ಇದೀಗ ನೇಮಕಾತಿ (Pre-placement) ಆಫರ್ ಗಿಟ್ಟಿಸಿಕೊಂಡಿದ್ದಾರೆ.
ಇದು ಆಳ್ವಾಸ್ ಕಾಲೇಜಿನ ಇತಿಹಾಸದಲ್ಲೇ ವಿದ್ಯಾರ್ಥಿಯೊಬ್ಬರು ಪಡೆದ ಅತಿ ದೊಡ್ಡ ಉದ್ಯೋಗ ಪ್ಯಾಕೇಜ್ ಆಗಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದು ಜಾಗತಿಕ ಮಟ್ಟದ ಕಂಪನಿಯಲ್ಲಿ ಸಾಧನೆ ಮಾಡಿದ ಸೃಷ್ಟಿಯ ಯಶಸ್ಸಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


