ಮೂಡುಬಿದಿರೆಯ ಮರಿಯಾಡಿಯ ಮಸ್ಜಿದುನ್ನೂರು ಜುಮ್ಮಾ ಮಸೀದಿಯಲ್ಲಿ ಮಂಗಳವಾರ ಸಂಜೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಧಾರ್ಮಿಕ ಸಭೆ ಹಾಗೂ ‘ಮಿಲಾದ್ ಫೆಸ್ಟ್’ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.
ಮಸೀದಿಯ ಅಧ್ಯಕ್ಷ ಹಾಮ್ಮದ್ ಕುಡಲಕಲ್ಲು ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯನ್ನು ಖತೀಬ್ ಉಸ್ತಾದ್ ಝೈನುದ್ದೀನ್ ಮದನಿ ಉದ್ಘಾಟಿಸಿ, ಪ್ರತಿಯೊಬ್ಬರ ಆಚರಣೆಗಳು ಬೇರೆಯಾಗಿದ್ದರೂ ನಾವೆಲ್ಲರೂ ಮಾನವ ಧರ್ಮವನ್ನು ಗೌರವಿಸಬೇಕು ಮತ್ತು ಈದ್ ಮಿಲಾದ್ ಹಬ್ಬವು ಸಹಬಾಳ್ವೆ ಹಾಗೂ ಸಹಕಾರದ ತತ್ವವನ್ನು ಬೋಧಿಸುತ್ತದೆ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಪ್ರಸನ್ನ ಹೆಗ್ಡೆ ಮಾತನಾಡಿ, ಜಾತಿ-ಮತ ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಾಮರಸ್ಯದಿಂದ ಬದುಕುವುದೇ ಮುಹಮ್ಮದ್ ಪೈಗಂಬರರ ಸಂದೇಶವಾಗಿದ್ದು, ಅದು ಎಲ್ಲ ಸಮುದಾಯಗಳಿಗೂ ಆದರ್ಶವಾಗಿದೆ ಎಂದರು. ತಸ್ರೀಫ್ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ರಾಜೇಶ್ ಕೋಟೆಗಾರ್, ಪ್ರಮುಖರಾದ ಗಂಗಾಧರ ಬಂಗೇರ, ಆನಂದ ಕುಮಾರ್, ಸುರೇಂದ್ರ ಶೆಟ್ಟಿ, ಬಾಲಕೃಷ್ಣ ಬಿ.ಕೆ, ಜಮಾತ್‌ನ ಹಿರಿಯರಾದ ಹಾಮ್ಮದ್ ಬಿ.ಕೆ, ಸಿದ್ದಿಕ್ ಬಿ.ಕೆ, ಖಿಳ್‌ರ್ ಉಸ್ತಾದ್ ಹಾಗೂ ಮಸೀದಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


