
ಮೂಡಬಿದಿರೆ: ಮಿಜಾರಿನ ಬಾಡಿಗೆ ಮನೆಯೊಂದರಲ್ಲಿ ಮಂಗಳವಾರ (ಆಗಸ್ಟ್ 11) ಮುಂಜಾನೆ ಆಕಸ್ಮಿಕವಾಗಿ ಎಲ್‌ಪಿಜಿ ಸಿಲಿಂಡರ್ ಸ್ಪೋಟಗೊಂಡು, ಒಂದೇ ಕುಟುಂಬದ ಮೂವರು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ಸಂಭವಿಸಿದೆ.
ಆಳ್ವಾಸ್ ಕಾಲೇಜಿನಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಶಿವರಾಮ (31), ಅವರ ಪತ್ನಿ ಗಂಗಾ (25) ಹಾಗೂ ಆರು ವರ್ಷದ ಪುತ್ರ ಆದರ್ಶ್ ಗಾಯಗೊಂಡವರಾಗಿದ್ದಾರೆ.
ಬೆಳಿಗ್ಗೆ ಸುಮಾರು 6:30ರ ವೇಳೆಗೆ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದು ಗಮನಕ್ಕೆ ಬಾರದೆ, ಬೆಂಕಿ ಹತ್ತಿಸಿದಾಗ ಏಕಾಏಕಿ ಸಿಲಿಂಡರ್ ಪೋಟಗೊಂಡಿದೆ ಎನ್ನಲಾಗಿದೆ. ಸ್ಪೋಟದ ರಭಸಕ್ಕೆ ಮನೆಯಲ್ಲಿದ್ದ ಶಿವರಾಮ, ಗಂಗಾ ಹಾಗೂ ಮಗು ಆದರ್ಶ್‌ಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಅದರಲ್ಲಿಯೂ ಕುಟುಂಬದ ಯಜಮಾನ ಶಿವರಾಮ ಅವರ ದೇಹಕ್ಕೆ ತೀವ್ರ ಪ್ರಮಾಣದ ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಶಬ್ದ ಕೇಳಿ ತಕ್ಷಣ ಧಾವಿಸಿ ಬಂದ ಸ್ಥಳೀಯರು, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.


