
ಸುಳ್ಯ: ಕ್ಯಾನ್ಸರ್ ಪೀಡಿತ ಗಂಡನ ಚಿಕಿತ್ಸೆಗೆ ದಾನಿಗಳು ನೀಡಿದ್ದ ಹಣವನ್ನು ಪುತ್ತೂರು ಶಾಸಕರ ಹೆಸರು ಹೇಳಿ ಸೈಬರ್ ಖದೀಮನೊಬ್ಬ ವಂಚಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣವೇ ಸ್ಪಂದಿಸಿದ ಶಾಸಕ ಅಶೋಕ್ ಕುಮಾರ್ ರೈ, ವಂಚನೆಗೊಳಗಾದ ಮಹಿಳೆಗೆ ತಾವು ಕಳೆದುಕೊಂಡ ಹಣಕ್ಕಿಂತಲೂ ಹೆಚ್ಚಿನ ಮೊತ್ತವನ್ನು ನೀಡಿ ದೊಡ್ಡ ಗುಣ ಪ್ರದರ್ಶಿಸಿದ್ದಾರೆ.
ಘಟನೆಯ ವಿವರ: ಸುಳ್ಯ ಕಸಬಾ ದಕ್ಷಿಣ ಬೀರಮಂಗಲದ ನಿವಾಸಿ ಗಣೇಶ್ ಎಂಬುವವರು ತೀವ್ರ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಇವರ ಬಡತನ ಹಾಗೂ ಕಷ್ಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದ್ದನ್ನು ಕಂಡು ಹಲವು ದಾನಿಗಳು ಸಹಾಯ ಹಸ್ತ ಚಾಚಿದ್ದರು. ಈ ಮೂಲಕ ಗಣೇಶ್ ಅವರ ಪತ್ನಿ ಪುಷ್ಪಾವತಿ ಅವರ ಬ್ಯಾಂಕ್ ಖಾತೆಗೆ ಒಟ್ಟು 22,500 ರೂಪಾಯಿ ಧನಸಹಾಯ ಜಮೆಯಾಗಿತ್ತು.
ಶಾಸಕರ ಹೆಸರು ಹೇಳಿ ವಂಚಿಸಿದ ಖದೀಮ: ಜುಲೈ 27ರ ಸಂಜೆ ಪುಷ್ಪಾವತಿ ಅವರಿಗೆ ಕರೆ ಮಾಡಿದ ಅನಾಮಿಕ ವ್ಯಕ್ತಿಯೊಬ್ಬ, “ನಿಮಗೆ ಪುತ್ತೂರು ಶಾಸಕ ಅಶೋಕ್ ರೈ ಅವರು 3 ಲಕ್ಷ ರೂಪಾಯಿ ಧನಸಹಾಯ ಘೋಷಿಸಿದ್ದಾರೆ. ಈ ಹಣ ನಿಮ್ಮ ಖಾತೆಗೆ ಬರಬೇಕಾದರೆ ನೀವು 25,000 ರೂಪಾಯಿ ಟ್ಯಾಕ್ಸ್ (ತೆರಿಗೆ) ಪಾವತಿಸಬೇಕು” ಎಂದು ನಂಬಿಸಿದ್ದಾನೆ. ಶಾಸಕರ ಮೇಲಿನ ಗೌರವ ಹಾಗೂ ಗಂಡನ ಚಿಕಿತ್ಸೆಯ ಭರವಸೆಯಿಂದ ಆಕೆಗೆ ವಂಚಕನ ಸಂಚು ತಿಳಿಯಲಿಲ್ಲ. ತಕ್ಷಣವೇ ತಮ್ಮ ಖಾತೆಯಲ್ಲಿದ್ದ ಇಡೀ 22,500 ರೂಪಾಯಿಯನ್ನು ಖದೀಮ ಸೂಚಿಸಿದ ನಂಬರ್‌ಗೆ ‘ಫೋನ್ ಪೇ’ ಮೂಲಕ ವರ್ಗಾಯಿಸಿದ್ದಾರೆ. ಹಣ ತಲುಪಿದ ಬೆನ್ನಲ್ಲೇ ಆ ನಂಬರ್ ಸ್ವಿಚ್ ಆಫ್ ಆಗಿದೆ. ತಾವು ವಂಚನೆಗೊಳಗಾಗಿದ್ದನ್ನು ಅರಿತ ಪುಷ್ಪಾವತಿ ಸುಳ್ಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಶಾಸಕರ ಮಾನವೀಯ ಸ್ಪಂದನೆ: ತಮ್ಮ ಹೆಸರು ಬಳಸಿ ರೋಗಿಯೊಬ್ಬರ ಕುಟುಂಬಕ್ಕೆ ವಂಚನೆ ಎಸಗಿದ ಸುದ್ದಿ ತಿಳಿಯುತ್ತಿದ್ದಂತೆಯೇ ತೀವ್ರ ಆಕ್ರೋಶ ಹಾಗೂ ವಿಷಾದ ವ್ಯಕ್ತಪಡಿಸಿದ ಶಾಸಕ ಅಶೋಕ್ ರೈ, “ಕ್ಯಾನ್ಸರ್ ರೋಗಿಯ ಚಿಕಿತ್ಸೆಗೆ ಬಂದ ಹಣವನ್ನು ಸುಳ್ಳು ಹೇಳಿ ದೋಚಿದ್ದು ದೇವರು ಮೆಚ್ಚದ ಕೆಲಸ” ಎಂದಿದ್ದಾರೆ.
ಅಲ್ಲದೆ, “ನನ್ನ ಹೆಸರು ಹೇಳಿದ್ದರಿಂದಲೇ ಶಾಸಕರ ಮೇಲಿನ ಗೌರವಕ್ಕೆ ಆ ಮಹಿಳೆ ಹಣ ಕಳುಹಿಸಿದ್ದಾರೆ. ಹೀಗಾಗಿ ಆಕೆ ಕಳೆದುಕೊಂಡ ಹಣವನ್ನು ನಾನೇ ಭರಿಸುತ್ತೇನೆ” ಎಂದು ಹೇಳಿದ ಶಾಸಕರು, ಪುಷ್ಪಾವತಿ ಅವರು ಕಳೆದುಕೊಂಡ 22,500 ರೂ. ಜೊತೆಗೆ ಹೆಚ್ಚುವರಿಯಾಗಿ 7,500 ರೂ. ಸೇರಿಸಿ ಒಟ್ಟು 30,000 ರೂಪಾಯಿಯನ್ನು ಅವರ ಖಾತೆಗೆ ಜಮೆ ಮಾಡುವುದಾಗಿ ತಿಳಿಸಿ, ಸಾಂತ್ವನ ನೀಡಿದ್ದಾರೆ. ಶಾಸಕರ ಈ ಕ್ಷಿಪ್ರ ಹಾಗೂ ಮಾನವೀಯ ಸ್ಪಂದನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


