
ಮಂಗಳೂರು: ನಗರದಲ್ಲಿ ಗಾಂಜಾ ಹಾಗೂ ಮಾದಕ ದ್ರವ್ಯ ಮುಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಮಂಗಳೂರು ಕಮಿಷನರೇಟ್ ಪೊಲೀಸರು ಸಮರ ಮುಂದುವರಿಸಿದ್ದು, ಮಂಗಳವಾರ ಕೋಟೆಕಾರ್ ಬೀರಿ ಹಾಗೂ ಕೊಣಾಜೆಯ ಬಂಟ್ಸ್ ಭವನದ ಬಳಿ ವಿದ್ಯಾರ್ಥಿಗಳನ್ನು ದಿಢೀರ್ ಡ್ರಗ್ ತಪಾಸಣೆಗೆ ಒಳಪಡಿಸಿದ್ದಾರೆ.
ಡಿಸಿಪಿ (ಐಎಂಡ್ಒ) ಅವರ ಮಾರ್ಗದರ್ಶನದಲ್ಲಿ ಸೌತ್ ಮತ್ತು ಸೆಂಟ್ರಲ್ ವಿಭಾಗದ ಎಸಿಪಿಗಳ ನೇತೃತ್ವದಲ್ಲಿ ಸಂಜೆ 4:30 ರಿಂದ 6:00 ಗಂಟೆಯವರೆಗೆ ಈ ಕಾರ್ಯಚರಣೆ ನಡೆಯಿತು. ಈ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಖಾಸಗಿ ಹಾಗೂ ಕಾಲೇಜು ಬಸ್ಗಳನ್ನು ತಡೆದು ಪರಿಶೀಲನೆ ನಡೆಸಲಾಯಿತು.
ಎಲ್ಲೆಲ್ಲಿ ತಪಾಸಣೆ?
- ಕೋಟೆಕಾರ್ ಬೀರಿ: ಉಳ್ಳಾಲದ ಕೋಟೆಕಾರ್ ಬೀರಿ ಬಳಿ ಎಸ್ಡಿಎಂ, ನಿಟ್ಟೆ ಕೆ.ಎಸ್. ಹೆಗ್ಡೆ, ಸೆಂಟ್ ಅಲೋಶಿಯಸ್, ಪಿಎ ಕಾಲೇಜು, ಬೀಯರೀಸ್ ಇನ್ಸ್ಟಿಟ್ಯೂಟ್, ಟಿಪ್ಪು ಸುಲ್ತಾನ್ ಹಾಗೂ ಕೆನರಾ ಕಾಲೇಜಿನ ಒಟ್ಟು 72 ವಿದ್ಯಾರ್ಥಿಗಳನ್ನು ಮಲ್ಟಿ ಡ್ರಗ್ ಟೆಸ್ಟಿಂಗ್ ಕಿಟ್ ಮೂಲಕ ಪರೀಕ್ಷಿಸಲಾಯಿತು. ಇವರಲ್ಲಿ 71 ವಿದ್ಯಾರ್ಥಿಗಳ ವರದಿ ‘ನೆಗೆಟಿವ್’ ಬಂದಿದ್ದು, ಒಬ್ಬ ವಿದ್ಯಾರ್ಥಿಗೆ ಡ್ರಗ್ಸ್ ಸೇವನೆ ‘ಪಾಸಿಟಿವ್’ ಬಂದಿದೆ.
- ಕೊಣಜೆ ಬಂಟ್ಸ್ ಭವನ: ಕೊಣಜೆ ಠಾಣಾ ವ್ಯಾಪ್ತಿಯ ಬಂಟ್ಸ್ ಭವನದ ಬಳಿ ಪಿಎ ಕಾಲೇಜಿನ ಎರಡು ಬಸ್ಗಳನ್ನು ತಡೆದು 87 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು. ಇಲ್ಲಿ ಪರೀಕ್ಷೆಗೊಳಗಾದ ಎಲ್ಲ ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದೆ.
ಇಡೀ ಕಾರ್ಯಾಚರಣೆಯಲ್ಲಿ ಒಟ್ಟು 159 ವಿದ್ಯಾರ್ಥಿಗಳನ್ನು ಪರೀಕ್ಷಿಸಿದ್ದು, ಅವರಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಪಾಸಿಟಿವ್ ಬಂದಿರುವುದು ಕೊಂಚ ಸಮಾಧಾನಕರ ವಿಷಯ. ಯುವಜನರಲ್ಲಿ ಡ್ರಗ್ಸ್ ಬಳಕೆ ಪ್ರಮಾಣ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದ್ದರೂ, ಮಾದಕ ದ್ರವ್ಯ ನಿಯಂತ್ರಣಕ್ಕೆ ಇನ್ನು ಹೆಚ್ಚಿನ ಕಠಿಣ ಕ್ರಮಗಳ ಅಗತ್ಯವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡ್ರಗ್ಸ್ ಸೇವನೆ ದೃಢಪಟ್ಟಿರುವ ವಿದ್ಯಾರ್ಥಿಯ ವಿರುದ್ಧ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಸೂಕ್ತ ಕೌನ್ಸೆಲಿಂಗ್ಗೆ ಕಳುಹಿಸಲಾಗುವುದು ಹಾಗೂ ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


