
ಬಂಟ್ವಾಳ: ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ನಡೆದಿದ್ದ ಯುವತಿಯ ಭೀಕರ ಕೊಲೆ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಅಧಿಕೃತವಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.ಜುಲೈ 16ರಂದು ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕಕ್ಯಪದವು ನಿವಾಸಿ ಲಾವಣ್ಯ ಎಂಬ ಯುವತಿಯನ್ನು ಬೆಳ್ತಂಗಡಿ ಓಡಿಲ್ನಾಳ ಮೂಲದ ಚೇತನ್ ಸಾರ್ವಜನಿಕವಾಗಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದ. ಕೃತ್ಯದ ಬಳಿಕ ಕಾರಿನಲ್ಲಿ ಪರಾರಿಯಾಗಿದ್ದ ಈತನನ್ನು ಮರುದಿನವೇ ಪೊಲೀಸರು ಮಂಗಳೂರಿನಲ್ಲಿ ವಶಕ್ಕೆ ಪಡೆದಿದ್ದರು.ಆದರೆ, ಕೃತ್ಯ ಎಸಗಿದ ಬಳಿಕ ಆರೋಪಿ ಇಲಿಪಾಷಾಣ ಸೇವಿಸಿದ್ದರಿಂದ ಆತನನ್ನು ತಕ್ಷಣವೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಕಳೆದ 11 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಈತ ಸಂಪೂರ್ಣ ಗುಣಮುಖನಾದ ಹಿನ್ನೆಲೆಯಲ್ಲಿ, ವೈದ್ಯರ ಸಲಹೆಯಂತೆ ಬಂಟ್ವಾಳ ನಗರ ಪೊಲೀಸರು ಸೋಮವಾರ (ಜುಲೈ 27) ಅಧಿಕೃತವಾಗಿ ಆತನನ್ನು ಬಂಧಿಸಿದ್ದಾರೆ.ಬಂಟ್ವಾಳ ಎಎಸ್‌ಪಿ ಯಶ್ ಕುಮಾರ್ ಶರ್ಮ ಅವರ ಮಾರ್ಗದರ್ಶನದಲ್ಲಿ ಹಾಗೂ ಇನ್ಸ್‌ಪೆಕ್ಟರ್ ಆನಂತಪದ್ಮನಾಭ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.


