
ಕಾರ್ಕಳ: ತಾಲೂಕಿನ ಅಜೆಕಾರಿನಲ್ಲಿ ತೀವ್ರ ಹೃದಯಾಘಾತದಿಂದ ಉಮೇಶ್ ಶೆಟ್ಟಿ (41) ಎಂಬುವವರು ದುರಂತ ಅಂತ್ಯ ಕಂಡಿದ್ದಾರೆ. ಅವರು ಅಜೆಕಾರು ಉಗ್ರಾಣಿಬೆಟ್ಟು ನಿವಾಸಿಯಾಗಿದ್ದರು.
ಮೃತ ಉಮೇಶ್ ಅವರು ಕಳೆದ ಕೆಲವು ಸಮಯದಿಂದ ಕಡಿಮೆ ರಕ್ತದೊತ್ತಡ (ಲೊ ಬಿಪಿ) ಹಾಗೂ ಫಿಟ್ಸ್ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ. ಜುಲೈ 25ರಂದು ಮುಂಜಾನೆ ಮನೆಯಿಂದ ಹೊರಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ತರುವಾಯ ಜಗಲಿಯಲ್ಲಿ ವಿಶ್ರಮಿಸುತ್ತಿದ್ದಾಗ ಅವರು ರಕ್ತವಾಂತಿ ಮಾಡಿಕೊಂಡಿದ್ದು, ಹಿಂದಿನ ದಿನವೂ ಹೀಗೆಯೇ ಆಗಿತ್ತೆಂದು ಮನೆಯವರಲ್ಲಿ ತಿಳಿಸಿದ್ದರು.
ಬಳಿಕ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರೆಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.ಈ ಆಕಸ್ಮಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


