
ಮಂಗಳೂರು: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಿದೇಶಿ ನಗದು, ಐಫೋನ್, ಪಾಸ್‌ಪೋರ್ಟ್ ಹಾಗೂ ಚಿನ್ನದ ಉಂಗುರವನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಸಿಐಎಸ್‌ಎಫ್ (CISF) ಪಡೆ ಸುರಕ್ಷಿತವಾಗಿ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದೆ.
ಜುಲೈ 26ರಂದು ಬೆಳಿಗ್ಗೆ ಪಾರ್ಕಿಂಗ್ ಪ್ರದೇಶದ ಲಗೇಜ್ ಟ್ರಾಲಿಯೊಂದರಲ್ಲಿ ಕಪ್ಪು ಬಣ್ಣದ ಪರ್ಸ್ ಅನ್ನು ಸೆಕ್ಯುರಿಟಿ ಸಿಬ್ಬಂದಿ ವಿಠಲ್ ಹೊಸಮನಿ ಗಮನಿಸಿ, ಭದ್ರತಾ ಪಡೆಗೆ ಮಾಹಿತಿ ನೀಡಿದ್ದರು. ಪರಿಶೀಲನೆ ನಡೆಸಿದಾಗ ಅದರಲ್ಲಿ ದುಬೈನಿಂದ ಆಗಮಿಸಿದ್ದ ನಿಶಾಲ್ ಶಹೀಕ್ ಎಂಬವರ ಪಾಸ್‌ಪೋರ್ಟ್, ಐಫೋನ್, ಚಿನ್ನದ ಉಂಗುರ, 10,000 ಅಮೆರಿಕನ್ ಡಾಲರ್ (ಸುಮಾರು ₹9 ಲಕ್ಷ) ಹಾಗೂ 500 ಯುಎಇ ದಿರ್ಹಮ್ಸ್ ಪತ್ತೆಯಾಗಿವೆ.
ಬಿಕೊನಾ ದೃಶ್ಯಾವಳಿ (CCTV) ಮತ್ತು ಬೋರ್ಡಿಂಗ್ ಪಾಸ್ ಆಧಾರದ ಮೇಲೆ ಪ್ರಯಾಣಿಕರನ್ನು ಸಂಪರ್ಕಿಸಿ, ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಎಲ್ಲಾ ವಸ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು. ಸಿಬ್ಬಂದಿಯ ಈ ಸಮಯಪ್ರಜ್ಞೆ ಮತ್ತು ಪ್ರಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


