Saturday, July 25, 2026
Homeಕರಾವಳಿಮಂಗಳೂರುಕಡಬ: ಪ್ರೇಯಸಿಯ ಕೋಪಕ್ಕೆ ಚರಂಡಿ ಪಾಲಾಯ್ತು ಕಾರಿನ ಕೀ: ಯುವಕನ ಫಜೀತಿ!

ಕಡಬ: ಪ್ರೇಯಸಿಯ ಕೋಪಕ್ಕೆ ಚರಂಡಿ ಪಾಲಾಯ್ತು ಕಾರಿನ ಕೀ: ಯುವಕನ ಫಜೀತಿ!

- Advertisement -
- Advertisement -

ಕಡಬ: ಸಣ್ಣ ವಿಷಯಕ್ಕೆ ಶುರುವಾದ ಜಗಳವೊಂದು ಕಾರಿನ ಕೀ ಚರಂಡಿ ಸೇರುವಂತೆ ಮಾಡಿದ್ದು, ಕೀ ಹುಡುಕಲು ಯುವಕನೋರ್ವ ಸಾರ್ವಜನಿಕರೊಂದಿಗೆ ಗಂಟೆಗಟ್ಟಲೆ ಪರದಾಡಿದ ಸ್ವಾರಸ್ಯಕರ ಘಟನೆ ಕಡಬದ ಸಂತೆಕಟ್ಟೆ ಬಳಿ ನಡೆದಿದೆ.

ಘಟನೆಯ ವಿವರ: ಈಶ್ವರಮಂಗಲ ಮೂಲದ ಯುವಕನೊಬ್ಬ ಕಡಬದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪ್ರೇಯಸಿಗೆ ಜನ್ಮದಿನದ ಶುಭಾಶಯ ಕೋರಲು ಸ್ನೇಹಿತನ ಸ್ವಿಫ್ಟ್ ಕಾರಿನಲ್ಲಿ ಆಗಮಿಸಿದ್ದ. ಸಂತೆಕಟ್ಟೆ ಬಳಿಯ ಕಚೇರಿಯೊಂದರಲ್ಲಿ ಇಬ್ಬರೂ ಭೇಟಿಯಾದಾಗ ಸಣ್ಣ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಕೋಪಗೊಂಡ ಯುವತಿ, ಯುವಕನ ಕೈಯಲ್ಲಿದ್ದ ಕಾರಿನ ಕೀಯನ್ನು ಕಸಿದು ಪಕ್ಕದಲ್ಲಿದ್ದ ಆಳವಾದ ಕೊಳಚೆ ಚರಂಡಿಗೆ ಎಸೆದು ಅಲ್ಲಿಂದ ತೆರಳಿದ್ದಾಳೆ.

5 ಗಂಟೆಗಳ ಶೋಧ: ಕೀ ಇಲ್ಲದೆ ಕಾರು ಕದಲಿಸಲಾಗದೆ ಗಲಿಬಿಲಿಗೊಂಡ ಯುವಕ, ಚರಂಡಿಯ ಕೊಳಚೆ ನೀರಿನಲ್ಲಿ ಕೀ ಹುಡುಕಲು ಶುರುಮಾಡಿದ್ದ. ಇದನ್ನು ಕಂಡ ಸ್ಥಳೀಯರು ಹಾಗೂ ಸಾರ್ವಜನಿಕರು ಸಹಾಯಕ್ಕೆ ಧಾವಿಸಿ, ಚರಂಡಿ ಸುತ್ತಲಿನ ಗಿಡಗಂಟಿಗಳನ್ನು ಕತ್ತರಿಸಿ ಸತತ 5 ಗಂಟೆಗಳ ಕಾಲ ಶೋಧ ನಡೆಸಿದರು.

ಆದರೆ ರಾತ್ರಿ 7:30 ಆದರೂ ಕೀ ಸಿಗದ ಕಾರಣ ಹುಡುಕಾಟವನ್ನು ಸ್ಥಗಿತಗೊಳಿಸಲಾಯಿತು. ಕೊನೆಗೆ ಯುವಕ ಕಾರನ್ನು ಕಡಬದಲ್ಲೇ ಬಿಟ್ಟು ಆಟೋ ರಿಕ್ಷಾದಲ್ಲಿ ಸ್ವಊರಿಗೆ ವಾಪಸಾಗಿದ್ದಾನೆ. ಈ ಘಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

- Advertisement -

Latest News

error: Content is protected !!