ಉಪ್ಪಿನಂಗಡಿ: ಈಗ ಬರುತ್ತೇನೆಂದು ಬೈಕ್ ತೆಗೆದುಕೊಂಡು ಹೋಗಿ ವಂಚಿಸಿದ ಪ್ರಕರಣದ ಆರೋಪಿಯನ್ನು ಕೊನೆಗೆ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಗಾಳಿಮುಖ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶ್ಯಾಮ್ ಜಿ ಕೃಷ್ಣನ್ (31) ನನ್ನು ಬೈಕ್ ಸಮೇತ ವಶಕ್ಕೆ ಪಡೆದಿದ್ದಾರೆ.
ಉಪ್ಪಿನಂಗಡಿಯ ರಾಜಧಾನಿ ಟವರ್ಸ್‌ನಲ್ಲಿರುವ ಶ್ರೀ ದೇವಿ ಸ್ಟಿಕ್ಕರ್ ಕಟಿಂಗ್ಸ್ ಸೆಂಟರ್ ಮಾಲೀಕ ಶೀನಪ್ಪ ಮುಗೇರ ಅವರಿಂದ ಆರೋಪಿ ಜೂನ್ 16ರಂದು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಬೈಕ್ ಪಡೆದು ನಾಪತ್ತೆಯಾಗಿ. ನಂತರ ಶೀನಪ್ಪ ಅವರಿಗೆ ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಕುರಿತು ದೂರು ದಾಖಲಾದರೂ ಆರಂಭದಲ್ಲಿ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಏಳು ದಿನಗಳ ನಂತರ ಆರೋಪಿಯ ಮೊಬೈಲ್ ಟ್ರ್ಯಾಕಿಂಗ್ ಮೂಲಕ ಗಾಳಿಮುಖದಲ್ಲಿ ಅವನ ಇರುವಿಕೆ ಪತ್ತೆಯಾಗಿದ್ದು, ಮಂಗಳವಾರ ನಸುಕಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬೈಕ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.


