ಬೆಳ್ತಂಗಡಿ: ನಿನ್ನೆ ಸುರಿದ ಗಾಳಿ ಸಹಿತ ಭಾರೀ ಮಳೆಗೆ ಉಜಿರೆ ಹಾಗೂ ಕನ್ಯಾಡಿ-1 ಗ್ರಾಮ ವ್ಯಾಪ್ತಿಯ ಅಂಬಡಬೆಟ್ಟು ಎಂಬಲ್ಲಿ ಹಳ್ಳಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಕಿರುಸಂಪರ್ಕ ಸೇತುವೆ ಕೊಚ್ಚಿ ಹೋಗಿದೆ. ಪರಿಣಾಮ ಸ್ಥಳೀಯರಿಗೆ ಉಜಿರೆ ಹಾಗೂ ಇತರೆಡೆಯ ಸಂಪರ್ಕ ಬಹುತೇಕ ಕಡಿತವಾಗಿದೆ.
ಉಜಿರೆ, ನಿಡಿಗಲ್ ಮೂಲಕ ನಡ, ಇಂದಬೆಟ್ಟು, ಕೊಲ್ಲಿ, ಗುರಿಪಳ್ಳ, ಪಡ್, ಕಯ್ಯಂಗು ಮೊದಲಾದ ಪ್ರದೇಶದ ಸಾವಿರಾರು ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ಅಂಬಡಬೆಟ್ಟು ನೂತನ ಕಿರು ಸೇತುವೆ 2.50 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಹಿಂದೆ ಇದ್ದ ಸೇತುವೆಯನ್ನು ತೆರೆವುಗೊಳಿಸಿ ಕಾಮಗಾರಿ ನಡೆಸುತ್ತಿದ್ದು, ಅದರ ಬದಿಯಲ್ಲಿ ಮಣ್ಣು ಹಾಕಿ ತಾತ್ಕಾಲಿಕ ಸೇತುವೆ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಹಳ್ಳ ಉಕ್ಕಿ ಹರಿದು ತಾತ್ಕಾಲಿಕ ರಸ್ತೆ ಮೇಲೆ ಮೂರು ಅಡಿಯಷ್ಟು ನೀರು ಹರಿದು ಮಣ್ಣು ಕೊಚ್ಚಿ ಹೋಗಿದೆ.
ಈ ವೇಳೆ, ಸ್ಥಳೀಯರು ಹಾಗೂ ಪೊಲೀಸ್ ಇಲಾಖೆ ಸೇರಿ ಎರಡು ಕಡೆಗಳಿಂದ ವಾಹನಗಳು ಚಲಿಸಿದಂತೆ ಕ್ರಮ ಕೈಗೊಂಡಿದ್ದಾರೆ. ಮಳೆ ಇದೇ ರೀತಿ ಮುಂದುವರಿದರೆ ತಾತ್ಕಾಲಿಕ ರಸ್ತೆ ಸಂಪೂರ್ಣ ನೀರು ಪಾಲಾಗಲಿದೆ. ಅಂಬಡಬೆಟ್ಟು ಪ್ರದೇಶದಲ್ಲಿ ಸಂಪರ್ಕ ಕಡಿತಗೊಂಡಿರುವ ಕಾರಣ ಸ್ಥಳೀಯರು ಹಾಗೂ ಶಾಲಾ ಮಕ್ಕಳು ಉಜಿರೆ ಹಾಗೂ ಇತರಡೆ ತರಲು 20 ಕಿ.ಮೀ ಸುತ್ತಿ ಬಳಸಿ ಬರಬೇಕಿದೆ. ಕಿರು ಸೇತುವೆಯನ್ನು ಮಳೆ ಆರಂಭಕ್ಕೆ ಮೊದಲು ನಿರ್ಮಿಸಿ ಕೊಡುವಂತೆ ಸ್ಥಳೀಯರು ಸಾಕಷ್ಟು ಬಾರಿ ಇಲಾಖೆ ಹಾಗೂ ಗುತ್ತಿಗೆದಾರರ ಗಮನಕ್ಕೆ ತಂದಿದ್ದರು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಮಳೆ ಇದೇ ರೀತಿ ಮುಂದುವರಿದರೆ ಈ ಮಳೆಗಾಲದಲ್ಲಿ ಈ ಪ್ರದೇಶದ ಜನರು ಸೇತುವೆ ಇಲ್ಲದೇ ಸಾಕಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.


