ಮಂಗಳೂರು; ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದ ಯು ಟಿ ಖಾದರ್ ಗೆ ಅದ್ಧೂರಿ ಸ್ವಾಗತ ದೊರೆತಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಅದ್ದೂರಿ ಸ್ವಾಗತ ನೀಡಿದರು.
ಡೊಳ್ಳು ಮತ್ತು ಬೃಹತ್ ಹಾರಗಳೊಂದಿಗೆ ಬೆಂಬಲಿಗರು ಯು.ಟಿ. ಖಾದರ್ ಅವರನ್ನು ಸ್ವಾಗತಿಸಿದರು. ಬಳಿಕ ಇತಿಹಾಸ ಪ್ರಸಿದ್ಧ ಪವಿತ್ರ ಉಳ್ಳಾಲ ಸಯ್ಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿದ ಸಚಿವ ಖಾದರ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಸಚಿವರನ್ನು ಭೇಟಿ ಮಾಡಿ ಶುಭ ಹಾರೈಸಿದರು.
ಮಂಗಳೂರಿಗೆ ತೆರಳುವ ಮುನ್ನ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಮಾಜಿ ಆರೋಗ್ಯ ಇಲಾಖೆ ಸಚಿವ ಮತ್ತು ಮಾಜಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಯು.ಟಿ. ಖಾದರ್ ಮಾತುಕತೆ ನಡೆಸಿದ್ದರು. ಆರೋಗ್ಯ ಇಲಾಖೆ ವಹಿಸಿಕೊಂಡ ಒಂದು ಗಂಟೆಯಲ್ಲೇ ಬೆಂಗಳೂರಿನ ಜಯನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದ ಯು.ಟಿ. ಖಾದರ್ ವ್ಯವಸ್ಥೆಯನ್ನು ಪರಿಶೀಲಿಸಿ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.



