ಕೊಡಗು: ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಕಾದಾಟಕ್ಕೆ ಮಹಿಳೆ ಬಲಿ ಪ್ರಕರಣದ ಬೆನ್ನಲ್ಲೇ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವನ್ನಪ್ಪಿದೆ.
ಕುಶಾಲನಗರದ ದುಬಾರೆ ಕ್ಯಾಂಪ್ನಲ್ಲಿ ಆನೆಗಳ ನಡುವೆ ಸಿಲುಕಿ ಪ್ರವಾಸಕ್ಕೆ ಬಂದಿದ್ದ ಚೆನ್ನೈ ಮೂಲದ ಮಹಿಳೆ ದಾರುಣವಾಗಿ ಉಸಿರು ಚೆಲ್ಲಿದ್ದರು. ಅವರ ಮಗು ಮತ್ತು ಪತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದರು. ಆ ಬೆನ್ನಲ್ಲೇ ಕಾದಾಟದ ವೇಳೆ ಗಂಭಿರವಾಗಿ ಗಾಯಗೊಂಡಿದ್ದ ಆನೆ ಮಾರ್ತಾಂಡ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಂದು (ಮೇ 19) ಮೃತಪಟ್ಟಿದೆ.ಭಾನುವಾರ ಸ್ನಾನಕ್ಕೆಂದು ಕಾವೇರಿ ನದಿಗೆ ಮಾವುತರು ಕಂಜನ್ ಮತ್ತು ಮಾರ್ತಾಂಡ ಆನೆಗಳನ್ನು ಕರೆತಂದಿದ್ದರು. ಈ ವೇಳೆ ಅವುಗಳ ನಡುವೆ ಕಾದಾಟ ಆರಂಭವಾಗಿದ್ದು, ದಂತದಿಂದ ತಿವಿದು ಕಂಜನ್ ಆನೆ ಮಾರ್ತಾಂಡ ಆನೆಯನ್ನು ನೆಲಕ್ಕೆ ಉರುಳಿಸಿತ್ತು. ಆ ಬಳಿಕ ಕೆಲ ಸಮಯದವರೆಗೂ ಆನೆಗಳು ಕಾದಾಡಿದ್ದವು. ಮಾವುತರು ಎಷ್ಟೇ ಪ್ರಯತ್ನ ಪಟ್ಟರೂ ಮದವೇರಿದಂತೆ ವರ್ತಿಸುತ್ತಿದ್ದ ಕಂಜನ್ ಆನೆಯನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ಮಾರ್ತಾಂಡ ಆನೆ ಗಂಭೀರವಾಗಿ ಗಾಯಗೊಂಡಿತ್ತು. ಗಾಯಗೊಂಡಿದ್ದ ಮಾರ್ತಾಂಡಗೆ ಶಿಬಿರದಲ್ಲೇ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ಅದು ಇಂದು ಮೃತಪಟ್ಟಿದೆ ಎಂದು ಡಿಎಫ್ಒ ಅಭಿಶೇಕ್ ಮಾಹಿತಿ ನೀಡಿದ್ದಾರೆ.


