ಪುತ್ತೂರು : ಯಕ್ಷಗಾನ ಕಲಾವಿದರು ಮತ್ತು ಅವರ ಹೆತ್ತವರ ಅವಹೇಳನ ಹಾಗೂ ಬೆದರಿಕೆ ಪ್ರಕರಣಕ್ಕೆ ಕುರಿತಂತೆ ಮಹೇಶ್ ಶೆಟ್ಟಿ ತಿಮರೋಡಿ ಮಂಗಳೂರಿನ ಆರನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮೇ 6ರಂದು ವಜಾ ಮಾಡಿದೆ.
ಯಕ್ಷಗಾನ ಕಲಾವಿದ ಪ್ರಜ್ವಲ್ ಕುಮಾರ್ ಅವರಿಗೆ ಮೊಬೈಲ್‌ನಲ್ಲಿ ಮಾತನಾಡುವ ಸಂದರ್ಭ ಮಹೇಶ್ ಶೆಟ್ಟಿ ತಿಮರೋಡಿ ಅವರು ಯಕ್ಷಗಾನ ಕಲಾವಿದ ದಿನೇಶ್ ಕೊಡಪದವು ಹಾಗೂ ತಾಯಿಯ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದು, ಈ ಕುರಿತು ದಿನೇಶ್ ಕೊಡಪದವು ಅವರ ತಾಯಿ, ಲೀಲಾವತಿ ಶೆಟ್ಟಿಗಾರ್ ಅವರು ಪುತ್ತೂರಿನ ಮಹಿಳಾ ಠಾಣೆಯಲ್ಲಿ ಎ.13 ರಂದು ಪ್ರಕರಣ ದಾಖಲು ಮಾಡಿದ್ದರು.
ವಾದ ಪ್ರತಿವಾದವನ್ನು ಆಲಿಸಿದ ಆರನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಟೆ ಅವರು ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಇನ್ನೊಂದು ಪ್ರಕರಣ ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿದೆ. ಅದಕ್ಕೆ ಸಂಬಂಧಿಸಿದಂತೆಯೂ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.


