ನವದೆಹಲಿ: ದೇಶದಲ್ಲಿ ಪ್ರವಾಹ, ಭೂಕಂಪ ಮತ್ತು ಭೂ ಕುಸಿತದಂತಹ ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರ ಮೊಬೈಲ್ ಫೋನ್ ಗಳಿಗೆ ನೇರವಾಗಿ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೆಲ್ ಬ್ರಾಡ್ ಕಾಸ್ಟಿಂಗ್ ಅಲರ್ಟ್ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ.
ಇದರ ಭಾಗವಾಗಿ ನಾಗರಿಕರ ಮೊಬೈಲ್ ಫೋನ್ ಗಳಿಗೆ ಇಂದಿನಿಂದ ಸೈರನ್ ಮೂಲಕ ಪ್ರಾಯೋಗಿಕ ಸಂದೇಶ ಬರಲಿದ್ದು, ಬೆಂಗಳೂರು ಭಾಗದ ನಾಗರಿಕರ ಮೊಬೈಲ್ ಗಳಿಗೆ ಇಂದು ಪ್ರಾಯೋಗಿಕ ಸಂದೇಶ ಕಳುಹಿಸಲ್ಪಟ್ಟಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಿಮ್ಮ ಭಾಗದಲ್ಲಿ ಸೆಲ್ ಬ್ರಾಡ್ ಕಾಸ್ಟಿಂಗ್ ಅಲರ್ಟ್ ತಾಂತ್ರಿಕ ಪರೀಕ್ಷೆ ನಡೆಸುತ್ತಿದ್ದು, ಮೊಬೈಲ್ ಫೋನ್ ಗೆ ಸಂದೇಶ ಬಂದಾಗ ಯಾರೂ ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ ಮತ್ತು ಆತಂಕ ಪಡಬೇಕಾಗಿಲ್ಲ ಎಂಬ ಸಂದೇಶ ನಿಮ್ಮ ಮೊಬೈಲ್ ಫೋನ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದೆ.

ಈ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದ ಬಳಿಕ ತುರ್ತು ಸಂದರ್ಭ ಅಥವಾ ಪ್ರಾಕೃತಿಕ ವಿಕೋಪದ ಸಂಧರ್ಭದಲ್ಲಿ ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಗಳಿಗೆ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ.
ಎಲ್ಲಾ 2ಜಿ, 3ಜಿ, 4ಜಿ ಮತ್ತು 5ಜಿ ಸಿಮ್ ಇರುವ ಮೊಬೈಲ್ ಫೋನ್ ಗಳಿಗೆ ಈ ಎಚ್ಚರಿಕೆ ಸಂದೇಶ ರವಾನೆಯಾಗಲಿದ್ದು, ಮೊಬೈಲ್ ಕಂಪನಿಗಳ ನೆಟ್ ವರ್ಕ್ ಟವರ್ ಗಳ ಮೂಲಕ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.


