ಹಾಸನ; ದಿಢೀರ್ ಕುಸಿದು ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಶ್ವೇತಾ (25) ಮೃತ ಯುವತಿ. ಶ್ವೇತಾ ಅವರು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಹಠಾತ್ ಸಾವನ್ನಪ್ಪಿದ್ದಾರೆ.
ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ನಿವಾಸಿಯಾದ ಶ್ವೇತಾ, ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಏಪ್ರಿಲ್ 25ರ ಶುಕ್ರವಾರ ಸಂಜೆ ಮನೆಯಲ್ಲಿದ್ದಾಗ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೋಮಾಗೆ ಜಾರಿದ್ದರು.
ಮೆದುಳು ನಿಷ್ಕ್ರಿಯಗೊಂಡ ಕಾರಣ ಶ್ವೇತಾ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.. ಈ ನೋವಿನ ಸಂದರ್ಭದಲ್ಲೂ ಶ್ವೇತಾ ಅವರ ಪೋಷಕರಾದ ಗಂಗಾಧರ್ ಮತ್ತು ಸರೋಜ ಅವರು ಮಗಳ ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಇಂದು ಶ್ವೇತಾ ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿತು. ಶ್ವೇತಾ ಸಾವು ಅವರ ಕುಟುಂಬಸ್ಥರಲ್ಲಿ ಹಾಗೂ ಸ್ನೇಹಿತರಲ್ಲಿ ತೀವ್ರ ದುಃಖ ಮೂಡಿಸಿದೆ.


