ಬೆಳ್ತಂಗಡಿ; ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ಮೀಸಲಾತಿ ಎನ್ನುವುದು ಕೇವಲ ರಾಜಕೀಯ ಘೋಷಣೆಯಲ್ಲ, ಅದು ಕಾಂಗ್ರೆಸ್ ಪಕ್ಷದ ರಾಜಕೀಯ ಬದ್ಧತೆ. ಮಹಿಳಾ ಮೀಸಲಾತಿ ನೀಡಬೇಕು ಎನ್ನುವ ವಿಚಾರ ಕಾಂಗ್ರೆಸ್ ಪಕ್ಷದ ಬಹು ದಿನಗಳ ಬೇಡಿಕೆ ಮತ್ತು ಕನಸು. ದೇಶದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಲಕ್ಷಾಂತರ ಮಹಿಳೆಯರನ್ನು ತಳಮಟ್ಟದಿಂದಲೇ ರಾಜಕೀಯ ನಾಯಕತ್ವ ನೀಡುವ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದ್ದು ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಎನ್ನುವುದನ್ನು ಇತಿಹಾಸ ಮರೆತಿಲ್ಲ. ಪಂಚಾಯತ್ ಮಟ್ಟದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತಂದದ್ದು ಕೇವಲ ಕಲ್ಯಾಣದ ಕಾರ್ಯಕ್ರಮವಲ್ಲ, ಅದು ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದ ಐತಿಹಾಸಿಕ ನಿರ್ಧಾರವಾಗಿತ್ತು. ಭಾರತದ ಪ್ರಜಾಪ್ರಭುತ್ವದ ಇತಿಹಾಸವನ್ನು ನೋಡಿದರೆ, ಮಹಿಳಾ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ, ಮೊದಲ ಮಹಿಳಾ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್, ಲೋಕಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ ಶ್ರೀಮತಿ ಮೀರಾ ಕುಮಾರಿ, ಪ್ರಮುಖ ಸ್ಥಾನಮಾನಗಳಲ್ಲಿ ಮಹಿಳೆಯರಿಗೆ ಪ್ರತಿನಿತ್ಯ, ಸಂಖ್ಯಾತ ಮಹಿಳಾ ಮಹಾಪೌರರು, ಮಹಿಳಾ ಪಂಚಾಯತ್ ಅಧ್ಯಕ್ಷರುಗಳು ಪಂಚಾಯತ್ ಸದಸ್ಯರುಗಳು ಸೇರಿದಂತೆ ಅನೇಕ ಮಹಿಳಾ ನಾಯಕತ್ವಗಳನ್ನು ರೂಪಿಸಿದ ಪರಂಪರೆ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದ್ದಾರೆ.
ಕಾಂಗ್ರೆಸ್ ಹಾಗೂ ವಿಪಕ್ಷಗಳು ಮಹಿಳಾ ಮೀಸಲಾತಿಯ ವಿರೋಧಿಗಳು ಎಂಬ ಭ್ರಾಂತಿಯನ್ನು ದೇಶದ ಜನರಲ್ಲಿ ಬಿಂಬಿಸುವ ವ್ಯರ್ಥ ಪ್ರಯತ್ನ ಭಾರತೀಯ ಜನತಾ ಪಕ್ಷ ನಡೆಸುತ್ತಾ ಬಂದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಹಾಗೂ ಶ್ರೀಮತಿ ಸೋನಿಯಾ ಗಾಂಧಿಯವರ ಮುತುವರ್ಜಿಯಲ್ಲಿ ರಾಜಕೀಯ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇ ಕಾಂಗ್ರೆಸ್ ಪಕ್ಷ ಎನ್ನುವುದನ್ನು ದೇಶದ ಜನರು ಮರೆತಿಲ್ಲ. ಜನರನ್ನು ಮೂರ್ಖರನ್ನಾಗಿಸುವ ವ್ಯರ್ಥ ಪ್ರಯತ್ನಕ್ಕೆ ಪ್ರಧಾನಿಗಳು ಸಂಸತ್ತುನ್ನು ಬಳಸಿಕೊಂಡಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.
ಮಹಿಳಾ ಮೀಸಲಾತಿಗೆ ದೇಶದಲ್ಲಿ ಯಾರೂ ವಿರೋಧಿಗಳಿಲ್ಲ. ಆದರೆ ಬಿಜೆಪಿ ಪಕ್ಷ ಹಾಗೂ ಅದರ ಸೂತ್ರದಾರರು ಇದನ್ನು ರಾಜಕೀಯ ಲಾಭಕ್ಕೆ ಬಳಸಲು ನಡೆಸುತ್ತಿರುವ ಹುನ್ನಾರಗಳನ್ನು ಪ್ರಶ್ನೆ ಮಾಡುತ್ತಿದ್ದೇವೆ. ಮಹಿಳೆಯರನ್ನು ಎರಡನೇ ದರ್ಜೆಯಾಗಿ ನೋಡುವ ಸಂಘಪರಿವಾರದ ರಾಜಕೀಯ ಘಟಕ ರಾಜಕೀಯ ಮೀಸಲಾತಿಯ ಬಗ್ಗೆ ಮಾತಾಡುವುದು ಹಾಸ್ಯಸ್ಪದ. ನೇರವಾಗಿ ಕ್ಷೇತ್ರ ಪುನರ್ ವಿಂಗಡನೆ ಮಸೂದೆಯನ್ನು ವಿಶೇಷ ಅಧಿವೇಶನದಲ್ಲಿ ಮಂಡಿಸಿದರೆ ಅದಕ್ಕೆ ಖಂಡಿತ ಸೋಲು ಉಂಟಾಗುತ್ತದೆ ಎಂಬ ಸ್ಪಷ್ಟ ಮಾಹಿತಿ ಇದ್ದು. ಮಹಿಳಾ ಮೀಸಲಾತಿ ಮಸೂದೆಯನ್ನು ಮುಂದಿಟ್ಟು ತನ್ನ ಮುಖಾಂತರ ಕ್ಷೇತ್ರ ಪುನರ್ ವಿಂಗಡನೆಯ ಮಸೂದೆಯನ್ನು ಮಂಡಿಸುವ ವ್ಯರ್ಥ ಪ್ರಯತ್ನವನ್ನು ಬಿಜೆಪಿ ಮಾಡಿ ಇವತ್ತು ಸೋಲನ್ನು ಕಂಡಿದೆ. ದೇಶದ ವಿರೋಧಪಕ್ಷಗಳನ್ನ ಅತ್ಯಂತ ಹೀನಾಯವಾಗಿ ಕಾಣುತ್ತಿದ್ದು ಇವತ್ತು ವಿರೋಧ ಪಕ್ಷಗಳ ಒಗ್ಗಟ್ಟಿನಿಂದ ಬಿಜೆಪಿಗೆ ಭಾರಿ ಮುಖಭಂಗ ಉಂಟಾಗಿದೆ ಎಂದಿದ್ದಾರೆ.


