ಯಾದಗಿರಿ; : ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ 6 ಜನ ಸಜೀವ ದಹನವಾಗಿರುವ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವಾಪುರ ಬಳಿ ನಡೆದಿದೆ. ಯಾದಗಿರಿಯಿಂದ ರಾಯಚೂರು ಕಡೆ ಹೊರಟಿದ್ದ ಕಾರು, ಬೆಂಗಳೂರಿನಿಂದ ಕಲಬುರಗಿ ಕಡೆ ಬರುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ನಿವಾಸಿಗಳು ಎಂದು ಗುರುತಿಸಲಾಗಿದೆ. ಇಂದು ಅಮವಾಸ್ಯೆ ಹಿನ್ನೆಲೆ ವೇಣುಗೋಪಾಲ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಜವರಾಯನ ಅಟ್ಟಹಾಸಕ್ಕೆ ಕಾರಲ್ಲಿದ್ದ ಕೌನ್ಸಿಲರ್ ಕೃಷ್ಣನಾಯಕ್ (50), ಕೃಷ್ಣನಾಯಕ್ ಹೆಂಡತಿ ಅನಂತ್ ಕಲಾ (45), ಶರಣಪ್ಪ (36), ಶರಣಪ್ಪ ಹೆಂಡತಿ ನಿಸರ್ಗ (30), ಶರಣಪ್ಪ ಮಗು ಸಿದ್ದಾರ್ಥ್ (3) ಮತ್ತು ಶಶಿಕಲಾ (30) ಮೃತರು.

ಭೀಕರ ಅಪಘಾತದಲ್ಲಿ ಬಸ್ ಮತ್ತು ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರೂ ಪವಾಡ ಎಂಬಂತೆ 5 ವರ್ಷದ ಅಥ್ವಿಕ ಮತ್ತು ಒಂದು ವರ್ಷದ ಮಗು ಶ್ರೀನಿಧಿ ಬದುಕುಳಿದ್ದಾರೆ. ದೇವರ ದರ್ಶನ ಮುಗಿಸಿಕೊಂಡು ವಾಪಸ್ ಹೋಗುವಾಗ ಘಟನೆ ನಡೆದಿದ್ದು, ಕಾರು ಓವರ್ಟೇಕ್ ಮಾಡಲು ಹೋದಾಗ ಅಪಘಾತ ಸಂಭವಿಸಿದೆ. ಕಾರು ಬಸ್ಗೆ ಗುದ್ದಿದ ಬಳಿಕ ಸುಮಾರು 50 ಮೀಟರ್ ದೂರ ಬಸ್ ಕಾರನ್ನು ಎಳೆದುಕೊಂಡು ಹೋಗಿದೆ ಎನ್ನಲಾಗಿದೆ.


