ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ನೀಳಿ ಕಂಗಳ ಹುಡುಗಿ ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಫೇಮಸ್ ಆಗಿದ್ದ ಮೋನಾಲಿಸಾಳ ವೈವಾಹಿಕ ಜೀವನ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಈ ಯುವತಿ ಅಪ್ರಾಪ್ತ ವಯಸ್ಸಿನವಳು ಎಂಬ ಸತ್ಯಾಂಶ ಬಯಲಾಗಿದ್ದು, ಆಕೆಯ ಪತಿ ಫರ್ಮಾನ್ ಖಾನ್ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (NCST) ನಡೆಸಿದ ಸುದೀರ್ಘ ತನಿಖೆಯ ನಂತರ ಈ ಮಾಹಿತಿ ಹೊರಬಿದ್ದಿದ್ದು, ಆಸ್ಪತ್ರೆಯೊಂದರ ಅಧಿಕೃತ ದಾಖಲೆಗಳ ಪ್ರಕಾರ, ಮೋನಾಲಿಸಾ ಡಿಸೆಂಬರ್ 30, 2009 ರಂದು ಜನಿಸಿದ್ದು, ಮಾರ್ಚ್ 11, 2026 ರಂದು ಆಕೆಯ ಮದುವೆಯಾದ ಸಮಯದಲ್ಲಿ ಆಕೆಗೆ ಕೇವಲ 16 ವರ್ಷ ವಯಸ್ಸಾಗಿತ್ತು ಎಂಬುದು ಸಾಬೀತಾಗಿದೆ.
ಕೇರಳದಲ್ಲಿ ನಡೆದಿದ್ದ ಇವರ ವಿವಾಹಕ್ಕಾಗಿ ನಕಲಿ ಜನನ ಪ್ರಮಾಣಪತ್ರವನ್ನು ಬಳಸಲಾಗಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಆಕೆಯನ್ನು ವಯಸ್ಕಳು ಎಂದು ಬಿಂಬಿಸಲು ಉದ್ದೇಶಪೂರ್ವಕವಾಗಿ ದಾಖಲೆಗಳನ್ನು ತಿದ್ದಲಾಗಿತ್ತು. ಮದುವೆ ನಡೆದ ದೇವಸ್ಥಾನದ ಅಧಿಕಾರಿಗಳಿಗೆ ಈ ಜೋಡಿಯು ಆಧಾರ್ ವಿವರಗಳನ್ನು (Aadhaar Redacted) ನೀಡಿದ್ದರು ಎನ್ನಲಾಗಿದೆ.
ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ (POCSO) ಕಾಯ್ದೆ, ಭಾರತೀಯ ನ್ಯಾಯ ಸಂಹಿತೆ (BNS), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿಪ್ರಕರಣ ದಾಖಲಿಸಲಾಗಿದೆ.
ಎನ್‌ಸಿಎಸ್‌ಟಿ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ಅವರ ನೇತೃತ್ವದಲ್ಲಿ ನಡೆದ ಈ ತನಿಖೆಯು ಕೇರಳ ಮತ್ತು ಮಧ್ಯಪ್ರದೇಶದಾದ್ಯಂತ ವಿಸ್ತರಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 22 ರಂದು ದೆಹಲಿಯಲ್ಲಿ ಹಾಜರಾಗುವಂತೆ ಕೇರಳ ಮತ್ತು ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ (DGP) ಸಮನ್ಸ್ ಜಾರಿ ಮಾಡಲಾಗಿದೆ. ಅಲ್ಲದೆ ಪ್ರತಿ ಮೂರು ದಿನಕ್ಕೊಮ್ಮೆ ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಆಯೋಗ ಸೂಚಿಸಿದೆ.


