ಸುಳ್ಯ; ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ನಾರ್ಕೊಡು ಮಿತ್ತಡ್ಕ ಎಂಬಲ್ಲಿ ನಡೆದಿದೆ..
ಮಾ.25ರಂದು ತಡರಾತ್ರಿ ಆಲೆಟ್ಟಿ ಮಾರ್ಗವಾಗಿ ಕೇರಳದ ಕಡೆಗೆ ಪಿಕಪ್ ವಾಹನವೊಂದು ಟಾರ್ಪಲ್ ಮುಚ್ಚಿಕೊಂಡು ತೆರಳುತ್ತಿತ್ತು. ಅನುಮಾನಗೊಂಡ ಪೊಲೀಸರು ಪಿಕಪ್ ವಾಹನವನ್ನು ಹಿಂಬಾಲಿಸಿದ್ದಾರೆ. ಬಳಿಕ ನಾರ್ಕೊಡು ಮಿತ್ತಡ್ಕ ಎಂಬಲ್ಲಿ ವಾಹನವನ್ನು ಅಡ್ಡಹಾಕಿ ಪರಿಶೀಲಿಸಿದ್ದಾರೆ. ಈ ವೇಳೆ ಮೂರು ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಿಸುತ್ತಿದ್ದದ್ದು ಕಂಡು ಬಂದಿದೆ. ಪೊಲೀಸರು ಪಿಕಪ್ ಅನ್ನು ಅಡ್ಡ ಹಾಕಿದ ತಕ್ಷಣ ಗಾಡಿಯಲ್ಲಿ ಇದ್ದ ಓರ್ವ ಆರೋಪಿ ಓಡಿ ತಪ್ಪಿಸಿಕೊಂಡಿದ್ದಾನೆ. ಪಿಕಪ್ ಚಾಲಕ ಕೇರಳದ ಇಸಾಕ್ ನನ್ನು, ವಾಹನ ಹಾಗೂ ಗೋವುಗಳನ್ನು ಠಾಣೆಗೆ ತಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ವೇಳೆ ಇಸಾಕ್ ನೀಡಿದ ಮಾಹಿತಿಯಂತೆ ಸುಳ್ಯದ ಬೋರುಗುಡ್ಡೆ ನಿವಾಸಿ ಇಬ್ರಾಹಿಂ ಹಾಗೂ ಅಮರಮುಡ್ನೂರು ಗ್ರಾಮದ ಸಂತೋಷ್ ಭಟ್ ಎಂಬುವವರನ್ನು ಬಂಧಿಸಲಾಗಿದೆ. ಸುಳ್ಯ ಎಸ್ಐ ಸಂತೋಷ್, ಸಿಬ್ಬಂದಿ ಪ್ರಕಾಶ್, ಅನು ಕುಮಾರ್ , ಸತೀಶ್, ಸಂತೋಷ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.


