ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಇನ್ನೂ ಎರಡು ಬಜೆಟ್ ಮಂಡನೆ ಮಾಡುತ್ತಾರೆ ಎಂದು ವಸತಿ ಇಲಾಖೆ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ್ದ ಸಚಿವ ಜಮೀರ್ ಅಹಮದ್ ಈ ಮಾತು ಹೇಳಿದ್ದಾರೆ.
ಸಿದ್ದರಾಮಯ್ಯ ಇನ್ನು ಎಷ್ಟು ಬಜೆಟ್ ಮಂಡಿಸುತ್ತಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆ ಮಾಡಿದಾಗ, ಇನ್ನೂ ಒಂದಲ್ಲ, ಎರಡು ಬಜೆಟ್ ಮಂಡಿಸುತ್ತಾರೆ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
ಅಧಿಕಾರ ಹಸ್ತಾಂತರದ ಕುರಿತಾದ ಚರ್ಚೆಗಳು ಮುಂದುವರಿದಿರುವ ನಡುವೆಯೇ ಸದನದಲ್ಲೇ ಜಮೀರ್ ಅಹಮದ್ ಹೇಳಿಕೆ ಮಹತ್ವ ಪಡೆದಿದೆ.
ಈ ಮಧ್ಯೆ ಬಜೆಟ್ ಚರ್ಚೆ ವೇಳೆ, ಮುಂದಿನ ಬಾರಿ ನಮಗೆ ಚರ್ಚೆ ಮಾಡಲು ಡಿಕ್ಷನರಿ ಕೂಡಾ ಒದಗಿಸಿ, ಅಷ್ಟು ದೊಡ್ಡ ದೊಡ್ಡ ಶಬ್ದಗಳನ್ನು ಬಜೆಟ್ ನಲ್ಲಿ ಸೇರಿಸಿಕೊಂಡಿದ್ದಾರೆ ಎಂದು ಶಾಸಕ ಸುನೀಲ್ ಕುಮಾರ್ ಸ್ಪೀಕರ್ ಗೆ ಮನವಿ ಮಾಡಿದರು.


