ಬೆಂಗಳೂರು: ಲೀವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ಕೊಡಗಿನ ಯುವತಿಯನ್ನು ವೈಯರ್ ನಿಂದ ಬಿಗಿದು ಕೊಂದ ಕೊಡಗಿನ ಯುವಕನೊಬ್ಬ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಡಗಿನ ಪೊನ್ನಂಪೇಟೆ ಮೂಲದ ರಂಜಿತಾ (23) ಕೊಲೆಯಾದ ಯುವತಿ. ಪೊನ್ನಂಪೇಟೆಯವನೇ ಆದ ಅಯ್ಯಪ್ಪ ಕೊಲೆಗೈದ ಆರೋಪಿ.
ಅಯ್ಯಪ್ಪನಿಗೆ ಈಗಾಗಲೇ ಮದುವೆಯಾಗಿದ್ದು, ಹೆಂಡತಿಯನ್ನು ಬಿಟ್ಟಿದ್ದ. ತನ್ನ ಊರಿನ ಪಕ್ಕದವಳೇ ಆದ ರಂಜಿತಾಳನ್ನು ಪ್ರೀತಿಸುತ್ತಿದ್ದ . ಅವಳನ್ನೇ ಮದುವೆಯಾಗುವುದಾಗಿ ನಂಬಿಸಿದ್ದ. ಆತನ ಮಾತು ನಂಬಿದ ರಂಜಿತಾ ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದಳು.ಇಬ್ಬರೂ ಕೊಡತಿ ಬಳಿಯ ಮನೆಯಲ್ಲಿ ಕಳೆದ ಎರಡು ತಿಂಗಳಿನಿಂದ ವಾಸವಿದ್ದರು. ರಂಜಿತಾ ಡಿ-ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಅಯ್ಯಪ್ಪ ಡ್ರೈ ಫ್ರೂಟ್ಸ್ ಅಂಗಡಿಯಲ್ಲಿ ಸೂಪರ್‌ವೈಸರ್ ಆಗಿದ್ದ. ಆದರೆ, ಮೊದಲ ಪತ್ನಿಗೆ ವಿಚ್ಛೇದನ ನೀಡದೆ ತನ್ನನ್ನು ಮದುವೆಯಾಗುವಂತೆ ರಂಜಿತಾ ಒತ್ತಾಯಿಸುತ್ತಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ನಿರಂತರ ಜಗಳ ನಡೆಯುತ್ತಿತ್ತು. ಶುಕ್ರವಾರ ಮಧ್ಯರಾತ್ರಿ ಜಗಳ ವಿಕೋಪಕ್ಕೆ ತಿರುಗಿದಾಗ, ಆರೋಪಿ ಅಯ್ಯಪ್ಪ ವೈಯರ್‌ನಿಂದ ರಂಜಿತಾಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


