
ಮಂಗಳೂರು: ‘ಭಾಷೆಯ ಕಡೆಗಣನೆಗೆ ವಿಶ್ವವಿದ್ಯಾಲಯಗಳು ಹಾಗೂ ಅಧ್ಯಾಪಕರು ಕಾರಣ. ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಕಥೆ ಹಾಗೂ ಕವಿತೆಗಳ ಸಾರಾಂಶದ ಬಗ್ಗೆ ಅಷ್ಟೇ ಪಾಠ ಮಾಡಲಾಗುತ್ತದೆ ಹೊರತು ಅದನ್ನು ಆಳವಾಗಿ ವಿವರಿಸುವ ಕೆಲಸ ಆಗುವುದಿಲ್ಲ. ಆ ಕೆಲಸ ಹೆಚ್ಚಾದಾಗ ಮೌಲ್ಯಗಳು ಹಾಗೂ ಭಾಷೆ ಎರಡೂ ಅರಿವಿಗೆ ಬರಲು ಸಾಧ್ಯʼ ಎಂದು ಶತಾವಧಾನಿ ಆರ್. ಗಣೇಶ್ ಹೇಳಿದರು.
ಮಂಗಳೂರು ಲಿಟ್ ಫೆಸ್ಟ್ 8ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರಸ್ವತಿ ರಥ ಎಳೆಯುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ಮೀನಾಕ್ಷಿ ಜೈನ್, ಭಾರತ್ ಫೌಂಡೇಶನ್ ಟ್ರಸ್ಟಿ ಬ್ರಿಜೇಶ್ ಚೌಟ ಅವರು ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಡಾ. ಎಸ್.ಎಲ್. ಭೈರಪ್ಪ ಮತ್ತು ಡಾ. ವಿನಯ ಹೆಗ್ಡೆ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ಲಕ್ಷ್ಮೀ ಮಠದಮೂಳೆ ಅವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಡಾ. ವಿದ್ಯಾ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಶೈನಾ ಡಿಸೋಜಾ ಮತ್ತು ಆರ್‌ಜೆ ಅಭಿಷೇಕ್ ಶೆಟ್ಟಿ ನಿರೂಪಿಸಿದರು.


