ಇಂದಿನಿಂದಲೇ ದೇಶದದ್ಯಾಂತ ಜಾರಿಯಾಗುವಂತೆ ರೈಲು ಪ್ರಯಾಣ ದರ ಏರಿಕೆಯಾಗಿದೆ.
ಕಳೆದ ವಾರ ರೈಲ್ವೆ ಇಲಾಖೆ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಿತ್ತು. ಅದರಂತೆ ಶುಕ್ರವಾರ ಪರಿಷ್ಕೃತ ದರ ಜಾರಿಯಾಗಿದೆ. ಉಪನಗರ ರೈಲು ಪ್ರಯಾಣದ ದರವನ್ನು ಹೆಚ್ಚಿಸಿಲ್ಲವಾದರೂ, ದೀರ್ಘ ಪ್ರಯಾಣದ ದರವನ್ನು ರೈಲ್ವೆ ಸಚಿವಾಲಯ ಹೆಚ್ಚಳ ಮಾಡಿದೆ. ಪ್ರತಿ 500 ಕಿ.ಮೀ.ಗೆ 10 ರೂ. ಹೆಚ್ಚಳ ಮಾಡಲಾಗಿದೆ.ಡಿಸೆಂಬರ್ 21 ರಂದು ಸಚಿವಾಲಯವು ಪ್ರಯಾಣಿಕರ ದರದಲ್ಲಿ ಹೆಚ್ಚಳವನ್ನು ಘೋಷಿಸಿದ್ದು, ಹೊಸ ದರ ಇಂದಿನಿಂದ ಜಾರಿಗೆ ಬಂದಿದೆ.ಈ ವರ್ಷ ರೈಲು ದರದಲ್ಲಿ ಇದು ಎರಡನೇ ಹೆಚ್ಚಳವಾಗಿದೆ.
ಮುಂದಿನ ಪ್ರಯಾಣಕ್ಕಾಗಿ ಡಿಸೆಂಬರ್ 26 ರ ಮೊದಲು ಬುಕ್ ಮಾಡಿದ ಟಿಕೆಟ್‍ಗಳಿಗೆ ಈ ಬದಲಾವಣೆ ಅನ್ವಯಿಸುವುದಿಲ್ಲ. 215 ಕಿಲೋಮೀಟರ್ ದೂರದವರೆಗಿನ ಸಾಮಾನ್ಯ ದರ್ಜೆಯ ಟಿಕೆಟ್‍ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ 215 ಕಿಮೀಗಿಂತ ಹೆಚ್ಚಿನ ದೂರಕ್ಕೆ ಪ್ರತಿ ಕಿಮೀಗೆ 1 ಪೈಸೆ ವೆಚ್ಚವಾಗುತ್ತದೆ. ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಹವಾನಿಯಂತ್ರಿತವಲ್ಲದ ಕೋಚ್‍ಗಳಿಗೆ, ಪ್ರತಿ ಕಿಮೀಗೆ 2 ಪೈಸೆ ಹೆಚ್ಚಳವಾಗಲಿದೆ. ಹವಾನಿಯಂತ್ರಿತ ಕೋಚ್‍ಗಳಲ್ಲಿ ಪ್ರಯಾಣದ ವೆಚ್ಚವನ್ನು ಸಹ ಪ್ರತಿ ಕಿಮೀಗೆ 2 ಪೈಸೆ ಹೆಚ್ಚಿಸಲಾಗಿದೆ.
ಹೊಸ ದರಗಳು ಜಾರಿಗೆ ಬಂದ ನಂತರ ಹವಾನಿಯಂತ್ರಿತವಲ್ಲದ ಬೋಗಿಗಳಲ್ಲಿ 500 ಕಿ.ಮೀ ಪ್ರಯಾಣಕ್ಕೆ 10 ರೂ. ಹೆಚ್ಚಾಗಲಿದೆ. ಇದರಿಂದ ಪ್ರಯಾಣಿಕರಿಗೆ ಹೊರೆಯಾಗುವುದು ಖಚಿತವಾಗಿದೆ.


