ಮಂಗಳೂರು : 2006 ರಲ್ಲಿ ನಡೆದ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 19 ವರ್ಷಗಳ ಬಳಿಕ ಬಂಧಿಸಿದ್ದಾರೆ. ಅಬ್ದುಲ್ ಸಲಾಂ (47) ಬಂಧಿತ ಆರೋಪಿ.
ಪ್ರಕರಣದ ವಿವರ;
ದಿನಾಂಕ: 01.12.2006 ರಂದು ಸುರತ್ಕಲ್ ಪೊಲೀಸ್ ಠಾಣಾ ಸರಹದ್ದಿನ ಹೊಸಬೆಟ್ಟು ಬಳಿ ಸುಖಾನಂದ್ ಶೆಟ್ಟಿ ಎಂಬವರನ್ನು ಕಬೀರ್ ಹಾಗೂ ಆತನ ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದು ಪ್ರಕರಣದ ಪ್ರಮುಖ ಆರೋಪಿ ಕಬೀರ್ ಎಂಬಾತನಿಗೆ ಲತೀಫ್ @ ಅಡ್ಡೂರು ಲತೀಫ್ ಹಾಗೂ ಪ್ರಸ್ತುತ ಕಿನ್ನಿಪದವು ನಿವಾಸಿ ಅಬ್ದುಲ್ ಸಲಾಂ ಅಡ್ಡೂರು ಎಂಬ ಸಹೋದರರು ಅಡ್ಡೂರ್ ಟಿಬೇಟ್ ಕಾಲೋನಿಯಲ್ಲಿರುವ ಮನೆಯಲ್ಲಿ ಆಶ್ರಯ ನೀಡಿ 2 ದಿನ ಮನೆಯಲ್ಲಿರಿಸಿಕೊಂಡು ಪೊಲೀಸರಿಂದ ತಪ್ಪಿಸಿ ತಲೆಮರೆಸಿಕೊಳ್ಳಲು ಸಹಕಾರ ನೀಡಿ ನಂತರ ಕಬೀರ್ ನನ್ನು ವಾಹನದಲ್ಲಿ ಕೇರಳದ ಕಾಸರಗೋಡು ಬಳಿ ಬಿಟ್ಟು ನಂತರ ತಲೆಮರೆಸಿಕೊಂಡಿದ್ದ. ಅಬ್ದುಲ್ ಸಲಾಂ ಅಡ್ಡೂರು ಘಟನೆ ನಡೆದು ಮೂರು ತಿಂಗಳ ಬಳಿಕ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಆರೋಪಿಯು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದರಿಂದ ಆರೋಪಿಯ ಮೇಲೆ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಆರೋಪಿ 19 ವರ್ಷಗಳಿಂದ ದಸ್ತಗಿರಿಗೆ ಸಿಗದೇ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದರಿಂದ ಸದ್ರಿ ಆರೋಪಿಯ ಬಜಪೆ ಠಾಣಾ ವ್ಯಾಪ್ತಿಯಲ್ಲಿ ಇರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ದಿನಾಂಕ: 18.11.2025 ರಂದು ಸಂಜೆ 20-00 ಗಂಟೆಗೆ ಬಜಪೆ ಕಿನ್ನಿಪದವು ಬಳಿ ಬಂಧಿಸಿದ್ದಾರೆ.
ಈತನು 2007ನೇ ಇಸವಿಯಲ್ಲಿ ಪಾಸ್ ಪೋರ್ಟ್ ಮಾಡಿ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡು ಇತ್ತೀಚಿಗೆ ವಾಪಸ್ಸು ಬಂದಿದ್ದ. ಈತನು ಅಡ್ಡೂರಿನಲ್ಲಿರುವ ತನ್ನ ಮನೆಯನ್ನು ನೆಲಸಮಗೊಳಿಸಿ ಅಲ್ಲಿಂದ ಬಜಪೆಯ ಕಿನ್ನಿಪದವಿನ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದ. ಈತನ ಸಹೋದರ ಲತೀಫ್ @ ಅಡ್ಡೂರು ಲತೀಫ್ ಈತನು ವಿದೇಶದಲ್ಲಿ ತಲೆಮರೆಸಿಕೊಂಡಿರುತ್ತಾನೆ. ಈ ಪ್ರಕರಣದಲ್ಲಿ 16 ಆರೋಪಿಗಳನ್ನು ಈ ಹಿಂದೆ ಬಂಧಿಸಿದ್ದು ಉಳಿದ 11 ಜನ ಆರೋಪಿಗಳು ತಲೆಮರೆಸಿಕೊಂಡಿರುತ್ತಾರೆ. ಈತನ ಮೇಲೆ ಬಜಪೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಈತನ ಮೇಲೆ ಬಜಪೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಅನ್ನು ತೆರೆಯಲಾಗಿರುತ್ತದೆ. ಈತನ ಮೇಲೆ ನ್ಯಾಯಾಲಯದಿಂದ ಹಲವಾರು ಬಾರಿ ವಾರಂಟ್ ಗಳನ್ನು ಹೊರಡಿಸಿದ್ದು ಸದ್ರಿ ಆರೋಪಿಯು ಸುಮಾರು 19 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದುದರಿಂದ ಈತನ ವಿರುದ್ಧ ಠಾಣೆಯಲ್ಲಿ ಕಲಂ 209 ಬಿಎನ್.ಎಸ್ ರಂತೆ ಪ್ರಕರಣವನ್ನು ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಆರೋಪಿ ಪತ್ತೆಯ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತರು (ಉತ್ತರ ಉಪ ವಿಭಾಗ) ಶ್ರೀ ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಪಿ, ಪಿಎಸ್.ಐ ರಘುನಾಯಕ್ ಹಾಗೂ ಠಾಣಾ ಸಿಬ್ಬಂದಿಗಳಾದ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ರಾಜೇಂದ್ರ ಪ್ರಸಾದ್, ವಿನೋದ್ ನಾಯ್ಕ್, ಸುನೀಲ್ ಕುಸನಾಳ ಪತ್ತೆಯ ಬಗ್ಗೆ ಭಾಗವಹಿಸಿರುತ್ತಾರೆ.


