ಬೆಳ್ತಂಗಡಿ : ಧರ್ಮಸ್ಥಳದ ಬಗ್ಯೆ ನಡೆಯುತ್ತಿರುವ ಅಪಪ್ರಚಾರ ಮತ್ತು ಸುಳ್ಳು ವದಂತಿಗಳನ್ನು ಖಂಡಿಸಿ, ಬೆಂಗಳೂರಿನ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಶನಿವಾರ ನಾಲ್ಕು ನೂರು ಕಾರುಗಳಲ್ಲಿ ಎರಡು ಸಾವಿರ ಮಂದಿ ಧರ್ಮಸ್ಥಳದ ಭಕ್ತರು ಹಾಗೂ ಅಭಿಮಾನಿಗಳು “ಧರ್ಮಸ್ಥಳ ಚಲೋ ಅಭಿಯಾನ”ದಲ್ಲಿ ಆಗಮಿಸಿದರು.
ಆ.16 ರಂದು ಬೆಳಿಗ್ಗೆ ೬ ಗಂಟೆಗೆ ಯಲಹಂಕ ಟೋಲ್‌ನಿಂದ ಹೊರಟ ಜಾಥಾ ಅಪರಾಹ್ನ ಮೂರು ಗಂಟೆಗೆ ಧರ್ಮಸ್ಥಳ ತಲುಪಿತು.ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ೪೦೦ ಕಾರುಗಳಲ್ಲಿ ಬಂದ ೨೦೦೦ ಭಕ್ತರು ಬಂದಿದ್ದಾರೆ. “ಅನ್ನಪೂರ್ಣ” ಛತ್ರದಲ್ಲಿ ಅವರು ಭೋಜನ ಸ್ವೀಕರಿಸಿದರು. ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.ಸಂಜೆ ಏಳು ಗಂಟೆಗೆ ದೇವಸ್ಥಾನಕ್ಕೆ ಹೋಗಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಎಲ್ಲರೂ ನ್ಯಾಯಕ್ಕಾಗಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಸ್ಥಾನ ಆವರಣದಲ್ಲಿ ಎಲ್ಲರೂ ಸೇರಿ ಸಾಮೂಹಿಕ ಸಂಕಲ್ಪದೊಂದಿಗೆ ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎಸ್.ಆರ್. ವಿಶ್ವನಾಥ್, ಎಸ್.ಡಿ.ಪಿ.ಐ ಹಾಗೂ ಎಡಪಂಥೀಯರ ಕೈವಾಡ ಹಾಗೂ ಷಡ್ಯಂತ್ರದಿಂದ ಎಸ್.ಐ.ಟಿ ಸಮಿತಿಯನ್ನು ರಚಿಸಲಾಗಿದೆ. ಸರ್ವಧರ್ಮೀಯರ ಶ್ರದ್ಧಾಕೇಂದ್ರವಾದ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಯೆ ಆಧಾರ ರಹಿತ ಆರೋಪ ಹಾಗೂ ಸುಳ್ಳು ವದಂತಿ ಪಸರಿಸಲಾಗುತ್ತಿದೆ. ಯೂಟ್ಯೂಬರ್‌ಗಳು ಮಾಡುವ ಅಪಪ್ರಚಾರದ ಬಗ್ಯೆ ಎಲ್ಲರಿಗೂ ಭಯ ಹಾಗೂ ಆತಂಕವಿದ್ದು, ತಪ್ಪಿತಸ್ಥರ ಮೇಲೆ ಸುಮೊಟೊ ಪ್ರಕರಣ ದಾಖಲಿಸಿ ಉಗ್ರ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಪವರ್ ಟಿ.ವಿ.ಯ ಆಡಳಿತ ನಿರ್ದೇಶಕ ರಾಕೇಶ್ ಶೆಟ್ಟಿ ಮತ್ತು ಅಲೋಕ್ ಉಪಸ್ಥಿತರಿದ್ದರು.
ರಾಜ್ಯ ಬಿ.ಜೆ.ಪಿ. ಅಧ್ಯಕ್ಷ ವಿಜಯೇಂದ್ರ ಧರ್ಮಸ್ಥಳ ಭೇಟಿ .
ರಾಜ್ಯ ಬಿ.ಜೆ.ಪಿ. ಅಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಹಲವು ಮಂದಿ ಶಾಸಕರು ಮತ್ತು ಸಂಸದರು ಭಾನುವಾರ ಪೂರ್ವಾಹ್ನ ಏಳು ಗಂಟೆಗೆ ಧರ್ಮಸ್ಥಳಕ್ಕೆ ಆಗಮಿಸುವರು ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.


