ಬೆಳ್ತಂಗಡಿ: ಗಿರೀಶ್ ಮಟ್ಟನವರ್ ಹಾಗೂ ಮಹೇಶ್ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ನಿವಾಸಿ ಚರಣ್ ಶೆಟ್ಟಿ (32) ಎಂಬವರು ದೂರು ನೀಡಿದ್ದಾರೆ. ದೂರಿನಲ್ಲಿ ದಿನಾಂಕ: 06-08-2025 ರಂದು ರಾತ್ರಿ ತನ್ನ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಸಂದೇಶಗಳನ್ನು ಪರಿಶೀಲಿಸುತ್ತಿರುವಾಗ, ಆರೋಪಿತ ಗಿರೀಶ್ ಮಟ್ಟಣ್ಣವರ್ ರವರು ಅಪರಾಧಿಕ ಕೃತ್ಯಗಳನ್ನು ನಡೆಸಲು ದುಷ್ಪ್ರೇರಣೆಯಾಗುವಂತೆ, ಅಶ್ಲೀಲವಾಗಿ ಹಾಗೂ ಸಾರ್ವಜನಿಕರಿಗೆ ಕಿರಿ ಕಿರಿಯುಂಟಾಗುವ ರೀತಿಯಲ್ಲಿ ಮಾತನಾಡಿರುವ ವೀಡಿಯೋವನ್ನು ಪೇಸ್ಬುಕ್ ನಲ್ಲಿ ಪ್ರಸಾರಮಾಡಿರುವುದು ಕಂಡುಬಂದಿರುತ್ತದೆ ಎಂದು ತಿಳಿಸಿದ್ದಾರೆ. ಚರಣ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣಾ ಅಕ್ರ: 78/2025 ಕಲಂ:57, 296 ಜೊತೆಗೆ 190 ಬಿಎನ್ಎಸ್ -2023 ರಂತೆ ಪ್ರಕರಣ ದಾಖಲಾಗಿರುತ್ತದೆ.
ಇನ್ನು ಮಹೇಶ್ ತಿಮರೋಡಿರವರ ವಿರುದ್ಧ ಕೂಡ ದೂರು ನೀಡಿದ್ದು ದಿ 07-08-2025 ರಂದು ಬೆಳಿಗ್ಗೆ, ತನ್ನ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ನೋಡುತ್ತಿದ್ದಾಗ, ಆರೋಪಿತ ಮಹೇಶ್ ತಿಮರೋಡಿರವರು ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ನಲ್ಲಿ, ಪ್ರಾದೇಶಿಕವಾಗಿ ಜನರ ನಡುವೆ ವೈಮನಸ್ಸು ಉಂಟಾಗುವಂತಹ ಹಾಗು ಸಾರ್ವಜನಿಕರಲ್ಲಿ ಅಪಾಯದ ಬೀತಿಯನ್ನುಂಟುವಂತಹ ಹೇಳಿಕೆಗಳನ್ನು ಪ್ರಚಾರ ಮಾಡಿರುವುದು ಕಂಡುಬಂದಿರುತ್ತದೆ ಎಂದಿದ್ದಾರೆ. ಚರಣ್ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಠಾಣಾ ಅಕ್ರ: 79/2025 ಕಲಂ: 353(2) ಬಿಎನ್ಎಸ್ -2023ರಂತೆ ಪ್ರಕರಣ ದಾಖಲಾಗಿರುತ್ತದೆ.


