ಮಣಿಪಾಲ: ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಟಿ.ಟಿ ವಾಹನದ ಚಾಲಕನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂದು ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ಚಾಲಕ ಕಾರ್ಕಳ ನೀರೆ ಬೈಲೂರಿನ ಮೊಯ್ದಿನ್ ಬಾವ (65) ಎಂದು ತಿಳಿದುಬಂದಿದೆ.
ಇವರು ಪ್ರಗತಿನಗರದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳನ್ನು ಟಿ.ಟಿ ವಾಹನದಲ್ಲಿ ಶಾಲೆಗೆ ಸಾಗಿಸುತ್ತಿರುವಾಗ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಮಾರುಥಿ ವೀಥಿಕಾದಲ್ಲಿ ನಡೆದು ಸಾಗುತ್ತಿದ್ದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರನ್ನು ಕಂಡು, ಚಾಲಕ ವಾಹನವನ್ನು ನಿಲ್ಲಿಸಿದ್ದು, ಅವರಲ್ಲಿ ಎದೆನೋವಿನ ವಿಚಾರವನ್ನು ಹೇಳಿಕೊಂಡಿದ್ದಾನೆ.
ನಿತ್ಯಾನಂದ ಒಳಕಾಡು ಅವರು ತಕ್ಷಣವೇ ಒಳಕಾಡು ಅಂಬುಲೆನ್ಸ್ ವಾಹನದಲ್ಲಿ ಚಾಲಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಆದರೆ ಆಗಲೇ ಅವರು ಮೃತಪಟ್ಟಿರುವುದನ್ನು ವೈದ್ಯರು ತಿಳಿಸಿದರು.
ವಾಹನ ಚಾಲಕ ಟಿಟಿಯನ್ನು ಎದೆನೋವು ಕಾಣಿಸಿಕೊಂಡ ಸಂದರ್ಭದಲ್ಲಿ ನಿಲ್ಲಿಸಿದ ಕಾರಣ ಭಾರೀ ದೊಡ್ಡ ಅನಾಹುತ ತಪ್ಪಿದಂತಾಗಿದೆ.


