ಬೆಂಗಳೂರು: ಮುಂಗಾರು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯೂರಿಯಾ ಕೊರತೆ ಉಂಟಾಗಿದ್ದು, ರಾಜ್ಯದ ಪಾಲಿನ ರಸಗೊಬ್ಬರ ಪ್ರಮಾಣ ಪೂರೈಸುವಂತೆ ಕೇಂದ್ರ ರಸಗೊಬ್ಬರ ಇಲಾಖೆ ಸಚಿವ ಜಗತ್ ಪ್ರಕಾಶ್ ನಡ್ಡಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಭಾರತ ಸರ್ಕಾರವು 2025 ರ ಖಾರಿಫ್‌ಗೆ ಕರ್ನಾಟಕಕ್ಕೆ 11,17,000 ಮೆಟ್ರಿಕ್ ಟನ್ ಯೂರಿಯಾವನ್ನು ಹಂಚಿಕೆ ಮಾಡಿದ್ದು, ಅದರಲ್ಲಿ ಇಲ್ಲಿಯವರೆಗೆ 5,16,959 ಮೆಟ್ರಿಕ್ ಟನ್ ಮಾತ್ರ ಸರಬರಾಜು ಮಾಡಲಾಗಿದೆ.
ಆದರೆ ಏಪ್ರಿಲ್ ನಿಂದ ಜುಲೈ ವರೆಗೆ ರಾಜ್ಯದ ಯೂರಿಯಾದ ಅವಶ್ಯಕತೆ 6,80,655 ಮೆಟ್ರಿಕ್ ಟನ್ ಇದ್ದು, ಕೆಲವು ರಸಗೊಬ್ಬರ ಕಂಪನಿಗಳು ಭಾರತ ಸರ್ಕಾರ ಮಾಡಿದ ಹಂಚಿಕೆಯ ಪ್ರಕಾರ ಯೂರಿಯಾ ಗೊಬ್ಬರವನ್ನು ಪೂರೈಸಲು ತಮ್ಮ ಅಸಮರ್ಥತೆಯನ್ನು ವ್ಯಕ್ತಪಡಿಸಿವೆ ಎಂದು ಪತ್ರದಲ್ಲಿ ಹೇಳಿರುವ ಸಿದ್ದರಾಮಯ್ಯ,
ರಾಜ್ಯದಲ್ಲಿ ಯೂರಿಯಾ ಪೂರೈಕೆಯ ತುರ್ತು ಅವಶ್ಯಕತೆಯಿದ್ದು, ರೈತರ ಹಿತದೃಷ್ಟಿಯಿಂದ ರಾಜ್ಯ ಹಂಚಿಕೆಯ ಪ್ರಕಾರ ರಸಗೊಬ್ಬರ ಪೂರೈಕೆ ಮಾಡಿ ಎಂದು ಮನವಿ ಮಾಡಿದ್ದಾರೆ.
ಅಲ್ಲದೇ, ಬಾಕಿ ಕೊರತೆ ಇರುವ 1,65,541 ಮೆಟ್ರಿಕ್ ಟನ್ ಯೂರಿಯಾದ ಪೂರೈಕೆಯನ್ನು ತ್ವರಿತಗೊಳಿಸುವಂತೆಯೂ ಕೇಂದ್ರ ಸಚಿವರನ್ನು ಸಿಎಂ ಆಗ್ರಹಿಸಿದ್ದಾರೆ.
ಈಗಾಗಲೇ ಬಿತ್ತನೆ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಯೂರಿಯಾಕ್ಕೆ ಬೇಡಿಕೆ ಹೆಚ್ಚಾಗಿದ್ದು, ಸಕಾಲಕ್ಕೆ ಅಗತ್ಯ ಪ್ರಮಾಣದಷ್ಟು ರಸಗೊಬ್ಬರ ಪೂರೈಕೆಯಾಗುತ್ತಿಲ್ಲ ಎಂಬ ಅಸಮಾಧಾನ ರೈತರಿಂದ ವ್ಯಕ್ತವಾಗಿದೆ.


