ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ ಜುಲೈ 9 ರಂದು ಕನ್ನಡ ಮಾಧ್ಯಮ ವಿಭಾಗದ ನೂತನವಾಗಿ ದಾಖಲಾದ ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
ನೂತನ ವಿದ್ಯಾರ್ಥಿಗಳಿಗೆ ಶಿಕ್ಷಕರು ಆರತಿ ಎತ್ತಿ ತಿಲಕಧಾರಣೆ ಮಾಡಿ ಹಿರಿಯರು ಸಿಹಿಯನ್ನು ನೀಡಿ ಆಶೀರ್ವದಿಸಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಭಾರತಿ ಶಾಲೆ ಆಲಂಕಾರಿನ ಗೌರವಾಧ್ಯಕ್ಷರಾದ ಶ್ರೀಯುತ ಕೃಷ್ಣಕುಮಾರ್ ಆತ್ರಿಜಾಲು ಅವರು ಮಾತನಾಡುತ್ತಾ ಶಾಲೆಯಲ್ಲಿ ಕಲಿತ ಸಂಸ್ಕಾರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಪಸರಿಸಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀರಾಮ ವಿದ್ಯಾಲಯದ ಕಾರ್ಯದರ್ಶಿ ಮೂಲಚಂದ್ರ ಕಾಂಚನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾಲಯದ ಮುಖ್ಯ ಶಿಕ್ಷಕ ಗಣೇಶ್ ವಾಗ್ಲೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸುಜನ ಮಾತಾಜಿ ಸ್ವಾಗತಿಸಿ , ಕೋಮಲಾಂಗಿ ಮಾತಾಜಿ ವಂದಿಸಿದರು. ಭಾಗೀರಥಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.