ಬಂಟ್ವಾಳ; ಅಬ್ದುಲ್ ರಹಿಮಾನ್ ಹತ್ಯೆಗೆ ಆಕ್ರೋಶ ವ್ಯಕ್ತವಾಗಿದ್ದು, ಸುರತ್ಕಲ್ ನಲ್ಲಿ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.ಇನ್ನು ಬಂಟ್ವಾಳದ ರಹೀಂ ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಬಂಟ್ವಾಳದವರೆಗಿನ ನೂರಾರು ಅಂಗಡಿಗಳನ್ನು ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ.
ದುಷ್ಕರ್ಮಿಗಳಿಂದ ಕೊಲೆಯಾದ ಅಬ್ದುಲ್ ರಹೀಂ ಅವರ ಮೃತದೇಹವನ್ನು ಕೊಳತ್ತಮಜಲಿಗೆ ಇಂದು ಬೆಳಗ್ಗೆ ಸಾಗಿಸಲಾಯಿತು. ಕುತ್ತಾರ್ ಮದನಿ ನಗರ ಮಸೀದಿಯಲ್ಲಿ ರಹೀಂ ಅವರ ಮಯ್ಯತ್ ಸ್ನಾನ ಮಾಡಲಾಯಿತು. ನಂತರ ಮಯ್ಯತ್ ನಮಾಝ್ ಬಳಿಕ ಪೊಲೀಸ್ ಬಂದೋಬಸ್ತ್‌ನಲ್ಲಿ ಮೃತದೇಹವನ್ನು ಮೆರವಣಿಗೆಯ ಮೂಲಕ ಸಾಗಿಸಲಾಯಿತು. ಈ ವೇಳೆ ನೂರಾರು ಜನ ಸೇರಿದ್ದರು. ಅಲ್ಲದೇ ಹತ್ಯೆ ಖಂಡಿಸಿ ಮಂಗಳೂರಿನಿಂದ ಬಂಟ್ವಾಳದವರೆಗೆ ಅಂಗಡಿಗಳ ಮುಂಗಟ್ಟುಗಳು ಬಂದ್ ಮಾಡಿ ಮುಸ್ಲಿಮ್ ವ್ಯಾಪಾರಿಗಳು ಸಹ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಉಳ್ಳಾಲ ತಾಲ್ಲೂಕಿನ ಕುತ್ತಾರಿನಿಂದ ಹೊರಟ ಅಂತಿಮಯಾತ್ರೆಯು ಮಂಗಳೂರಿನ ನಂತೂರು, ಪಡೀಲ್ ಅಡ್ಯಾರ್ ಅರ್ಕುಳ, ಫರಂಗಿಪೇಟೆ, ಬಿ.ಸಿ.ರೋಡ್ ಮಾರ್ಗವಾಗಿ ಸಾಗಿತು. ರಹೀಂ ಅವರ ಪಾರ್ಥಿವ ಶರೀರವನ್ನು ಹೊತ್ತ ಆಂಬುಲೆನ್ಸ್ ಫರಂಗಿಪೇಟೆಯ ಬಳಿ ಸಾಗುತ್ತಿದ್ದಂತೆಯೇ ಅಲ್ಲಿ ಸೇರಿದ್ದವರು ಅಂತಿಮ ನಮನ ಸಲ್ಲಿಸಿದರು. ಫರಂಗಿಪೇಟೆಯ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಬಿ.ಸಿ.ರೋಡ್‌ನ ಮಿತ್ತಬೈಲ್ ಜುಮ್ಮಾ ಮಸೀದಿ ಬಳಿ ತಲುಪುವಾಗ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಿ.ಸಿ.ರೋಡ್‌ನಲ್ಲೂ ಬಹುತೇಕ ಅಂಗಡಿ ಮಳಿಗೆಗಳು ಮುಚ್ಚಿದ್ದವು. ತೆರೆದಿದ್ದ ಕೆಲವು ಮಳಿಗೆಗಳನ್ನು ಕೆಲವು ಆಕ್ರೋಶಿತ ಯುವಕರು ಬಲವಂತದಿಂದ ಮುಚ್ಚಿಸಿದರು. ಕೆಲಕಾಲ ರಸ್ತೆ ತಡೆ ನಡೆಸಿದರು.