ಮಂಗಳೂರು: ಅಪರೂಪದ ಪ್ರಕರಣವೊಂದರಲ್ಲಿ ಪುತ್ರಿಯರೇ ತಮ್ಮ ತಂದೆಯ ಮೇಲೆ ಮಾಡಿದ ಅತ್ಯಾಚಾರ ಆರೋಪದ ಪೈಕಿ ಎರಡನೇ ಪ್ರಕರಣದಲ್ಲೂ ನಗರದ ಪೋಕ್ಸೋ ನ್ಯಾಯಾಲಯವು ಆರೋಪಿ ತಂದೆಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇದೊಂದು ವಿಶೇಷ ಪ್ರಕರಣವಾಗಿದ್ದು, 2021ರ ಜೂನ್ ತಿಂಗಳಿನಲ್ಲಿ ಕಾಟಿಪಳ್ಳದ ನಿವಾಸಿಯಾದ ಅಬ್ದುಲ್ ಹಕೀಂ (48) ಎಂಬವರ ಮೇಲೆ ಅವರ ಇಬ್ಬರು ಹೆಣ್ಣು ಮಕ್ಕಳು ತಾವು ಅಪ್ರಾಪ್ತರಾಗಿ ಇದ್ದ ಸಂದರ್ಭದಲ್ಲಿ ನಮ್ಮ ತಂದೆ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಆರೋಪ ಮಾಡಿದ್ದರು. ಪ್ರಕರಣದ ಕುರಿತು ಮಂಗಳೂರಿನ ಮಹಿಳಾ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದವು.
ಈ ಪೈಕಿ, ಆರೋಪಿಯ ಕಿರಿಯ ಮಗಳು ನನ್ನ ತಂದೆಯು ಸತತ ಮೂರು ವರ್ಷಗಳಿಂದ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಳು. ಈ ಪ್ರಕರಣವನ್ನು ನ್ಯಾಯಾಲಯ ಕಳೆದ ಎರಡು ತಿಂಗಳಿನ ಹಿಂದೆ ಪೂರಕ ಸಾಕ್ಷ್ಯಾಧಾರ ಇಲ್ಲ ಎಂದು ಪರಿಗಣಿಸಿ ಆರೋಪಿಯನ್ನು ಖುಲಾಸೆಗೊಳಿಸಿತ್ತು.
ಇದೀಗ ನ್ಯಾಯಾಲಯದಲ್ಲಿ ಹಿರಿಯ ಮಗಳು ನೀಡಿದ್ದ ದೂರಿನಲ್ಲಿಯೂ ಆರೋಪ ಸಾಬೀತುಪಡಿಸುವಂತಹ ಯಾವುದೇ ಸೂಕ್ತ ಸಾಕ್ಷ್ಯಾಧಾರ ಇರುವುದಿಲ್ಲ ಎಂದು ಪರಿಗಣಿಸಿ ನ್ಯಾಯಾಲಯವು ಆರೋಪಿ ಅಬ್ದುಲ್ ಹಕೀಂ ಅವರನ್ನು ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ಎರಡನೇ ಎಫ್ ಟಿಎಸ್ ಸಿ ಪೋಕ್ಸೋ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ.ಎಂ ರಾಧಾಕೃಷ್ಣ ಅವರು ಆರೋಪಿಯನ್ನು ಬಿಡುಗಡೆ ಮಾಡಲು ಆದೇಶ ಮಾಡಿದ್ದಾರೆ.
ಇದರಿಂದಾಗಿ, ಆರೋಪಿ ಅಬ್ದುಲ್ ಹಕೀಂ ತನ್ನಿಬ್ಬರು ಪುತ್ರಿಯರು ಮಾಡಿದ್ದ ಅತ್ಯಾಚಾರ ಪ್ರಕರಣದಲ್ಲಿ, ದೂರು ದಾಖಲಾದ ಎರಡು ವರ್ಷದಲ್ಲೇ ದೋಷಮುಕ್ತಗೊಳ್ಳುವಂತಾಗಿದೆ. ಆರೋಪಿಯ ಪರವಾಗಿ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಮಂಗಳೂರು ನ್ಯಾಯವಾದಿಗಳಾದ ಆಸಿಫ್ ಬೈಕಾಡಿ,ರುಬಿಯ ಅಕ್ತರ್, ಮಹಮ್ಮದ್ ಅಸ್ಗರ್ ಮುಡಿಪು, ಶ್ರೀನಿಧಿ ಪ್ರಕಾಶ್, ನಿರೀಕ್ಷಾ ವಾದ ಮಂಡಿಸಿದ್ದರು.