
ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಖುಟಹನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
21 ವರ್ಷದ ಯುವತಿಯೊಬ್ಬಳು 14 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಎಸಗಿ, ನಂತರ ಆತನನ್ನು ಬ್ಲ್ಯಾಕ್‌ಮೇಲ್ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಸಂತ್ರಸ್ತ ಬಾಲಕನ ತಾಯಿ ನೀಡಿರುವ ದೂರಿನ ಪ್ರಕಾರ, ಬದ್ಲಾಪುರ ನಿವಾಸಿಯಾದ ಯುವತಿ ಸೋಶಿಯಲ್ ಮೀಡಿಯಾ ಮೂಲಕ ಬಾಲಕನಿಗೆ ಪರಿಚಯವಾಗಿದ್ದಳು. ಪ್ರೀತಿಯ ನಾಟಕವಾಡಿದ ಆಕೆ, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಅಷ್ಟೇ ಅಲ್ಲದೆ, ಈ ಕೃತ್ಯದ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ತೆಗೆದಿದ್ದಾಳೆ. ಇನ್ನು ಇದು ಕೇವಲ ಒಬ್ಬಳ ಕೃತ್ಯವಲ್ಲ, ಇದೊಂದು ಸಂಘಟಿತ ‘ಹನಿ ಟ್ರ್ಯಾಪ್’ ಮುಠ್ಠೆ ಎಂದು ಬಾಲಕನ ತಾಯಿ ಆರೋಪಿಸಿದ್ದಾರೆ.
ಮಾರ್ಚ್ 12 ರಂದು ಬಾಲಕನಿಗೆ ಕರೆ ಮಾಡಿದ ಯುವತಿ, “ನಾನು ಗರ್ಭಿಣಿಯಾಗಿದ್ದೇನೆ, ಹಣ ನೀಡದಿದ್ದರೆ ನಿನ್ನ ಮೇಲೆ ಅತ್ಯಾಚಾರದ ಸುಳ್ಳು ಕೇಸ್ ದಾಖಲಿಸುತ್ತೇನೆ” ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಈ ಗ್ಯಾಂಗ್ ಮುಗ್ಧ ಹುಡುಗರನ್ನು ಬಲೆಗೆ ಬೀಳಿಸಿ ಹಣ ವಸೂಲಿ ಮಾಡುವುದು ಮತ್ತು ಮಾನವ ಅಕ್ರಮ ಸಾಗಾಟದಲ್ಲಿ ತೊಡಗಿರುವ ಶಂಕೆ ವ್ಯಕ್ತವಾಗಿದೆ. ಯುವತಿ ಮತ್ತು ಆಕೆಯ ನಾಲ್ವರು ಸಹಚರರು ಸೇರಿ ಬಾಲಕನನ್ನು ಬೆದರಿಸುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಮೊದಲು ದೂರು ಸ್ವೀಕರಿಸದ ಕಾರಣ, ಬಾಲಕನ ತಾಯಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಉಮೇಶ್ ಕುಮಾರ್ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಯುವತಿ ಮತ್ತು ಆಕೆಯ ಸಹಚರರ ವಿರುದ್ಧ ಎಫ್‌ಐಆರ್ (FIR) ದಾಖಲಿಸುವಂತೆ ಖುಟಹನ್ ಪೊಲೀಸರಿಗೆ ಆದೇಶಿಸಿದ್ದಾರೆ.


