ಮಂಗಳೂರು : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-1 ನ್ಯಾಯಾಲಯವು 12 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಮೂಲತಃ ಗದಗಜಿಲ್ಲೆಯ ನಿವಾಸಿ, ನಗರದ ಕಾವೂರು ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ ಮಲ್ಲಿಕಾರ್ಜುನ ಹನುಮಂತಪ್ಪ (27) ಶಿಕ್ಷೆಗೊಳಗಾದ ಅಪರಾಧಿ.
ಸಂತ್ರಸ್ತೆ ಬಾಲಕಿಯ ಮತ್ತು ಆರೋಪಿ ಮಲ್ಲಿಕಾರ್ಜುನ ಮನೆ ಅಕ್ಕಪಕ್ಕದಲ್ಲಿತ್ತು. ಸಂತ್ರಸ್ತೆಯ ತಂದೆ ಮತ್ತು ಮಲ್ಲಿಕಾರ್ಜುನ ಸ್ನೇಹಿತರಾಗಿದ್ದು, ಜತೆಯಲ್ಲಿಯೇ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ನಡುವೆ ಮಲ್ಲಿಕಾರ್ಜುನ ವಿವಾಹವಾಗುವುದಾಗಿ ನಂಬಿಸಿ ಸ್ನೇಹಿತನ 16 ವರ್ಷದ ಮಗಳನ್ನು ಪುಸಲಾಯಿಸಿ, 2017ರ ಮೇ ತಿಂಗಳಿನಲ್ಲಿ ಅಪಹರಿಸಿದ್ದ.
ಹೆತ್ತವರು ಬಾಲಕಿ ನಾಪತ್ತೆಯಾದ ಬಗ್ಗೆ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ಗೋವಾದಲ್ಲಿ ಬಾಲಕಿಯ ಜತೆಗಿದ್ದು, ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದ. ಅದರ ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಳು. ಬಾಲಕಿ ಗೋವಾದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆರೋಪಿಯು ಬಾಲಕಿ ಮತ್ತು ಮಗುವನ್ನುಬಿಟ್ಟು ಪರಾರಿಯಾಗಿದ್ದ. ಹೆತ್ತವರಿಗೆ ಈ ವಿಚಾರ ತಿಳಿಸದಂತೆ ಜೀವ ಬೆದರಿಕೆಯನ್ನೂ ಹಾಕಿದ್ದ. ವಿಚಾರ ತಿಳಿದ ಬಾಲಕಿಯ ಹೆತ್ತವರು ಬಾಲಕಿಯನ್ನು ಆಕೆಯ ಮನೆಗೆ ಕರೆದುಕೊಂಡು ಬಂದು ಕಾವೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದರು .
ಅಪಹರಣ, ಅತ್ಯಾಚಾರ ,ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಎಸಿಪಿಗಳಾದ ರಾಜೇಂದ್ರ, ಮಂಜುನಾಥ ಶೆಟ್ಟಿಮತ್ತು ಶ್ರೀನಿವಾಸ ಗೌಡ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.