ಉತ್ತರಕನ್ನಡ: ಸಿನಿಮಾ ರಂಗ, ರಾಜಕೀಯ, ರಂಘಭೂಮಿ ಎಲ್ಲದರಲ್ಲೂ ತಮ್ಮ ಛಾಪು ಮೂಡಿಸಿರುವ ಉಮಾಶ್ರೀ ಇದೀಗ ಯಕ್ಷಲೋಕಕ್ಕೂ ಕಾಲಿಟ್ಟಿದ್ದಾರೆ.ಉತ್ತರಕನ್ನಡದ ಹೊನ್ನಾವರದ ಸೆಂಟ್ ಆಂಥೋನಿ ಮೈದಾನದಲ್ಲಿ ಶುಕ್ರವಾರ ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯು ಪ್ರದರ್ಶಿಸಿದ ‘ಶ್ರೀ ರಾಮ ಪಟ್ಟಾಭಿಷೇಕ’ ಪ್ರಸಂಗದಲ್ಲಿ ‘ಮಂಥರೆ’ಯ ಅಭಿನಯಿಸಿ ಯಕ್ಷಪ್ರೇಮಿಗಳ ಮನ ಗೆದ್ದಿದ್ದಾರೆ.
68 ನಿಮಿಷಗಳ ಕಾಲ ವೇದಿಕೆಯಲ್ಲೇ ಇದ್ದು ಕೈಕೇಯಿ ಪಾತ್ರಧಾರಿಯಾಗಿದ್ದ ಸುಬ್ರಹ್ಮಣ್ಯ ಯಲಗುಪ್ಪ ಅವರೊಂದಿಗೆ ಯಕ್ಷನೃತ್ಯದೊಂದಿಗೆ ನಿರರ್ಗಳ ಅರ್ಥಗಾರಿಕೆಯ ಮೂಲಕ ಸಭಿಕರ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿದರು. ಉಮಾಶ್ರೀ ಯಕ್ಷಗಾನ ವೇದಿಕೆಯಲ್ಲಿ ನೋಡಲೆಂದು ಹೊನ್ನಾವರದ ಹಳ್ಳಿಗಳಿಂದ, ಅಕ್ಕಪಕ್ಕದ ತಾಲ್ಲೂಕುಗಳಿಂದ, ಮಾತ್ರವಲ್ಲದೆ ವಿಟ್ಲ, ಪುತ್ತೂರು ಭಾಗದಿಂದಲೂ ಅಭಿಮಾನಿಗಳು ಸೇರಿದ್ದರು. ಯಕ್ಷಗಾನದಲ್ಲಿ ಅಭಿನಯಿಸುವ ಆಸೆಯಾಗಲಿ, ನಿರೀಕ್ಷೆಯಾಗಲಿ ಇರಲಿಲ್ಲ. ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಹಲವು ದಿನದಿಂದ ಯಕ್ಷಗಾನ ಪಾತ್ರ ಮಾಡುವಂತೆ ಒತ್ತಾಯಿಸುತ್ತಿದ್ದರು. ಅವರ ತಂದೆ ಯಕ್ಷಗಾನ ಕ್ಷೇತ್ರದ ದಿಗ್ಗಜ ಕಲಾವಿದ ರಾಮಚಂದ್ರ ಚಿಟ್ಟಾಣಿ ಅವರು ನನ್ನನ್ನು ಮಂಥರೆಯ ಪಾತ್ರದಲ್ಲಿ ನೋಡಲು ಬಯಸಿದ್ದರಂತೆ. ಹಿರಿಯ ಜೀವದ ಆಸೆ ಈಡೇರಿಸಿದ ಸಂತೃಪ್ತಿ ಸಿಕ್ಕಿದೆ’ ಎಂದು ಉಮಾಶ್ರೀ ಹೇಳಿದ್ದಾರೆ.