ಕಡಬ: ಇಲ್ಲಿನ ರೆಂಜಿಲಾಡಿ ಗ್ರಾಮದ ಕಾನದಬಾಗಿಲು ಎಂಬಲ್ಲಿ ಸಾರ್ವಜನಿಕ ಬಸ್ ತಂಗುದಾಣವನ್ನು ಸ್ಥಳೀಯ ವ್ಯಕ್ತಿಯೋರ್ವರು ಆಕ್ರಮಿಸಿಕೊಂಡು, ಬೇಲಿ ಹಾಕುವ ಹುನ್ನಾರ ನಡೆಸುತ್ತಿದ್ದಾರೆ ಎಂದು ವ್ಯಕ್ತಿಯ ವಿರುದ್ಧ ಪುತ್ತೂರು ಸಹಾಯಕ ಕಮೀಷನರ್‌ಗೆ ಮತ್ತು ಕಡಬ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಈ ಬಗ್ಗೆ ಕಾನದಬಾಗಿಲು ಅನುಷ್ಠಾನ ಸಮಿತಿಯ ಅಧ್ಯಕ್ಷ ಪರಮೇಶ್ವರ ಗೌಡ ಪುತ್ತೂರು ಸಹಾಯಕ ಆಯುಕ್ತರಿಗೆ ದೂರು ನೀಡಿ, ನೂಜಿಬಾಳ್ತಿಲ ಗ್ರಾ.ಪಂ.ಗೆ ಒಳಪಟ್ಟ ರೆಂಜಿಲಾಡಿ ಗ್ರಾಮದ ಕಲ್ಲು ಗುಡ್ಡೆ-ಕೊಣಾಜೆ ರಸ್ತೆಯಲ್ಲಿನ ಕಾನದಬಾಗಿಲು ಎಂಬಲ್ಲಿ ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ಸು ತಂಗುದಾಣವನ್ನು ನಿರ್ಮಿಸಲಾಗಿತ್ತು. ಸುಮಾರು 9 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಬಸ್ಸು ತಂಗುದಾಣವನ್ನು ಸ್ಥಳೀಯ ವ್ಯಕ್ತಿಯಾದ ಪುರುಷೋತ್ತಮ ಎಂಬವರು ಜು.23ರಂದು ಸ್ವಾಧೀನಪಡಿಸಲು ಸಿಮೆಂಟ್ ಕಂಬಗಳನ್ನು ಹಾಕಲು ತಯಾರಿ ನಡೆಸಿದ್ದು, ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತದೆ. ಈ ಬಗ್ಗೆ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದ್ದಾರೆ.