ಬೆಂಗಳೂರು: ಇನ್ಮುಂದೆ ದ್ವೇಷ ಭಾಷಣ ಮಾಡುವಂತಿಲ್ಲ, ಈಗಾಗಲೇ ದಾಖಲಾಗಿರುವ ಸೆಕ್ಷನ್ ಗಳ ಅಪರಾಧವನ್ನು ಪುನರಾವರ್ತಿಸುವಂತಿಲ್ಲ ಎಂದು ಹೈಕೋರ್ಟ್ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಇಂದು ಆದೇಶ ನೀಡಿದೆ.
ಕೋಮುಗಲಭೆಗಳಿಗೆ ಪ್ರಚೋದನೆ ನೀಡುವ ಭಾಷಣ ಮಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾಗಿರುವ ಎಫ್ಐಆರ್ ಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ದೂರುದಾರು ಇಬ್ರಾಹಿಂ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ನಲ್ಲಿ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂತು.
ಸರ್ಕಾರದ ಪರ ವಕೀಲರು ಮತ್ತು ಹರೀಶ್ ಪೂಂಜ ಪರ ವಕೀಲರು ಸಮಯಾವಕಾಶ ಕೇಳಿದರು. ಆದರೆ ಇಬ್ರಾಹಿಂ ಪರ ವಕೀಲ ಎಸ್ ಬಾಲನ್ ಅವರು ಸಮಯಾವಕಾಶ ನೀಡುವುದನ್ನು ವಿರೋಧಿಸಿ ವಾದ ಪ್ರಾರಂಭಿಸಿದರು. ಹರೀಶ್ ಪೂಂಜ ವಿರುದ್ದ ದಾಖಲಾಗಿರುವ ಎಫ್ಐಆರ್ ಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸದೇ ಇದ್ದರೆ ಅವರು ಅಪರಾಧವನ್ನು ಪುನರಾವರ್ತಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಿ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಪಡೆಯುತ್ತಾರೆ. ಇದು ಸರಿಯಾದ ಕ್ರಮವಲ್ಲ ಎಂದು ಎಸ್ ಬಾಲನ್ ವಾದಿಸಿದರು.
ವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಕುಮಾರ್ ಆಗಸ್ಟ್ 0 7ರವರೆಗೆ ತಡೆಯಾಜ್ಞೆ ಮುಂದುವರೆಸಿ “ಅರ್ಜಿದಾರ ಹರೀಶ್ ಪೂಂಜ ಯಾವುದೇ ದ್ವೇಷ ಭಾಷಣ, ಈಗಾಗಲೇ ಅವರ ವಿರುದ್ದ ದಾಖಲಾಗಿರುವ ಅಪರಾಧಿಕ ಸೆಕ್ಷನ್ ಗಳ ಅಪರಾಧವನ್ನು ಪುನರಾವರ್ತಿಸುವಂತಿಲ್ಲ” ಎಂದು ಆದೇಶ ನೀಡಿದ್ದಾರೆ.
ದ್ವೇಷ ಭಾಷಣ ಮಾಡುವಂತಿಲ್ಲ, ಅಪರಾಧ ಪುನರಾವರ್ತಿಸುವಂತಿಲ್ಲ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಗೆ ಹೈಕೋರ್ಟ್ ಆದೇಶ
- Advertisement -
- Advertisement -
- Advertisement -
