ಪುತ್ತೂರು; ಯುವತಿಯೊಂದಿಗೆ ಬಸ್ ನಲ್ಲಿ ಅಸಭ್ಯವಾಗಿ ವರ್ತಿಸಿದ ಯುವಕನ ವಿರುದ್ದ ಟ್ವಿಟ್ಟರ್ ಮೂಲಕ ಯುವತಿ ದೂರು ನೀಡಿದ ಬೆನ್ನಲ್ಲೇ ಆರೋಪಿಯನ್ನು ಪತ್ತೆಹಚ್ಚಿ ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಪುಣಚ್ಚಪಾಡಿಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಮೂಲತ: ಕಾಸರಗೋಡಿನ ವಿಷ್ಣು ಮೋಹನ್ ಬಂಧಿತ ಆರೋಪಿ.
ಸೆ.6ರಂದು ಯುವತಿ ಪುತ್ತೂರಿನಿಂದ ಕೆ.ಎಸ್.ಆರ್.ಟಿ.ಸಿ.ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ತನ್ನ ಪಕ್ಕದಲ್ಲಿದ್ದ ಆರೋಪಿಯು ಅನುಚಿತವಾಗಿ ವರ್ತಿಸಿ, ಬಸ್‌ನಿಂದ ಇಳಿಯುವ ವೇಳೆ ಚೀಟಿಯೊಂದರಲ್ಲಿ ಮೊಬೈಲ್ ನಂಬರನ್ನು ಫಿರ್ಯಾದುದಾರರಿಗೆ ನೀಡಿ ಕರೆಮಾಡುವಂತೆ ಕೈ ಸನ್ನೆ ಮಾಡಿರುವುದಾಗಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ಪೊಲೀಸ್ ವರಿಷ್ಠಾಧಿಕಾರಿಗೆ ಟ್ಯಾಗ್ ಮಾಡಿದ್ದರು.
ಕೂಡಲೇ ಸ್ಪಂದಿಸಿದ ಪೊಲೀಸ್ ಇಲಾಖೆ ಬೆಳ್ಳಾರೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಬೆಳ್ಳಾರೆ ಪೊಲೀಸರು ಮಹಿಳೆಯನ್ನು ಸಂಪರ್ಕಿಸಿ ಬಳಿಕ ದೂರನ್ನು ಸ್ವೀಕರಿಸಿಕೊಂಡಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲಂ : 354A(1)(i) 354(ಡಿ)ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.