ಕೋಟ: ಯಡ್ತಾಡಿ ಸಮೀಪದ ಕಾವಡಿಯಲ್ಲಿ ಶಿಕ್ಷಕಿಯೋರ್ವರು ಹೆಜ್ಜೇನು ದಾಳಿಯಿಂದ ಗಂಭೀರ ಗಾಯಗೊಂಡ ಘಟನೆ ಸೋಮವಾರದಂದು ಸಂಭವಿಸಿದೆ.
ದಾಳಿಗೊಳಗಾದವರು ಕಾವಡಿ ಪ್ರೌಢಶಾಲೆಯ ಗೌರವ ಶಿಕ್ಷಕಿ ಚುಕ್ಕಿ ಎನ್ನಲಾಗಿದೆ. ಇವರು ಮೂಲತಃ ಗುಜರಾತ್‌ನವರಾಗಿದ್ದು, ಪ್ರಸ್ತುತ ಬಾರ್ಕೂರಿನಲ್ಲಿ ವಾಸ. ಶಿಕ್ಷಕಿ ಅಪರಾಹ್ನ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಸ್ವಾಗತ ಗೋಪುರದ ಸಮೀಪ ಹತ್ತಾರು ಹೆಜ್ಜೇನುಗಳು ಒಮ್ಮೆಲೆ ದಾಳಿ ನಡೆಸಿದೆ. ಅಪರಾಹ್ನದ ವೇಳೆಯಾದ್ದರಿಂದ ರಸ್ತೆಯಲ್ಲಿ ಜನಸಂಚಾರ ವಿರಳವಾಗಿತ್ತು. ರಕ್ಷಣೆಗೆ ಯಾರು ಇರಲಿಲ್ಲ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಶಿಕ್ಷಕಿಯನ್ನು ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಸ್ಥಳೀಯರಾದ ಪ್ರಸಾದ್ ಮೆಂಡನ್ ಅವರು ಗಮನಿಸಿದ್ದು, ನೋವಿನಿಂದ ಬೊಬ್ಬೆ ಹೊಡೆಯುತ್ತಿದ್ದ ಶಿಕ್ಷಕಿಯ ಬಳಿ ತೆರಳಿ ಹೆಜ್ಜೇನು ದಾಳಿಯ ನಡುವೆ ತನಗೆ ಎದುರಾಗಬಹುದಾದ ಅಪಾಯವನ್ನೂ ಪರಿಗಣಿಸದೆ ರಕ್ಷಣೆಗೆ ಮುಂದಾದರು. ತನ್ನ ಕಾರಿನಲ್ಲಿ ಸಮೀಪದ ಮನೆಯೊಂದಕ್ಕೆ ಕರೆದೊಯ್ದು ಉಪಚರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.