ಬೆಂಗಳೂರು: ಆಸ್ಪತ್ರೆಯ ಹೊರಗೆ ನಡೆಯುವ ಎಲ್ಲಾ ಹಠಾತ್ ಸಾವುಗಳು ಇನ್ನು ಮುಂದೆ ನೋಟಿಫೈ ಆಗಲಿದ್ದು, ಹೃದಯಾಘಾತಗಳ ಬಗ್ಗೆ ಸಂಶೋಧನೆಗೆ ಹೆಚ್ಚಿನ ಅಂಕಿ ಅಂಶಗಳು ದೊರೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕೋವಿಡ್ ಅಡ್ಡ ಪರಿಣಾಮಗಳ ಕುರಿತು ತಜ್ಞರ ಸಮಿತಿಯ ವರದಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ ಬಳಿಕ ಶೇ 4 ರಿಂದ 5 ರಷ್ಟು ಹೃದಯಾಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಆದರೆ ಇದಕ್ಕೆ ಕೋವಿಡ್ ಲಸಿಕೆ ನೇರ ಕಾರಣವಲ್ಲ ಎಂಬುದು ತಜ್ಞರ ವರದಿಯಲ್ಲಿ ಹೇಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೃದಯಾಘಾತಗಳು ಹೆಚ್ಚಾಗಲು ಶೇ 50 ರಷ್ಟು ಪ್ರಕರಣಗಳಲ್ಲಿ ತಂಬಾಕು ಸೇವನೆಯೇ ಪ್ರಮುಖ ಕಾರಣ ಎಂಬುದು ತಜ್ಞರ ವರದಿಯಲ್ಲಿ ಹೇಳಲಾಗಿದೆ. ಇದರ ಹೊರತಾಗಿ
ಮಧುಮೇಹ, ರಕ್ತದೊತ್ತಡ, ಒಬೆಸಿಟಿ ಹೆಚ್ಚಾಗಿದೆ. ಸ್ಟಿರಾಯ್ಡ್ ಹೆಚ್ಚಿನ ಬಳಕೆಯೂ ಕೂಡ ಕಾರಣವಾಗಿದೆ. ಕೋವಿಡ್ ಪೂರ್ವದಲ್ಲಿ ಜಯದೇವ ಆಸ್ಪತ್ರೆ ಮೆಡಿಕಲ್ ರೆಕಾರ್ಡ್ಸ್ ಗೆ ಹೋಲಿಕೆ ಮಾಡಿ ಕೂಡಾ ವರದಿ ಸಿದ್ಧಪಡಿಸಲಾಗಿದೆ. ಆದರೆ 3 ವರ್ಷಗಳ ನಂತರ ಕೋವಿಡ್ ನಿಂದ ದುಷ್ಪರಿಣಾಮ ಬೀರಿರುವುದು ಕಡಿಮೆ ಎಂದು ತಜ್ಞರು ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಜ್ಞರ ವರದಿಯ ಹಿನ್ನೆಲೆಯಲ್ಲಿ ಹೃದಯಾಘಾತಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಯ ಹೊರಗೆ ನಡೆಯುವ ಎಲ್ಲಾ ಹಠಾತ್ ಸಾವುಗಳನ್ನು ಅಧಿಸೂಚಿತ ಖಾಯಿಲೆ ಎಂದು ಪರಿಗಣಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಆಸ್ಪತ್ರೆಯ ಹೊರಗೆ ನಡೆಯುವ ಎಲ್ಲ ಹಠಾತ್ ಸಾವುಗಳ ಡೆತ್ ಸರ್ಟಿಫಿಕೇಟ್ ಪಡೆಯಲು ಮರಣೋತ್ತರ ಪರೀಕ್ಷೆ ಕಡ್ಡಾಯವಾಗಲಿದೆ.
15 ವರ್ಷದ ಎಲ್ಲಾ ಶಾಲಾ ಮಕ್ಕಳನ್ನು ಹೃದಯ ತಪಾಸಣೆಗೆ ಒಳಪಡಿಸಲು ಪ್ಲಾನ್ ಮಾಡಲಾಗಿದ್ದು, ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ.
ಇನ್ನು ಸರ್ಕಾರದ ಮಟ್ಟದಲ್ಲಿ ಸರ್ಕಾರಿ ನೌಕರರಿಗೆ, ಗುತ್ತಿಗೆ ನೌಕರರಿಗೆ ಹೃದಯ ತಪಾಸಣೆ, ಎ6 ಸ್ಕ್ರೀನಿಂಗ್ ಮಾಡಲು ನಿರ್ಧರಿಸಿದ್ದು, ಖಾಸಗಿ ಕಂಪನಿಗಳು, ಉದ್ದಿಮೆದಾರರು ತಮ್ಮ ಕಂಪನಿಗಳಲ್ಲಿ ಕಾರ್ಮಿಕರಿಗೆ ವಾರ್ಷಿಕ ಆರೋಗ್ಯ ತಪಾಸಣೆ ನಡೆಸಲು ಆರೋಗ್ಯ ಸಚಿವರು ಸಲಹೆ ನೀಡಿದ್ದಾರೆ.