ಪುತ್ತೂರು; ಬೀರಮಲೆ ಬೆಟ್ಟದಲ್ಲಿ ಯುವಕ ಹಾಗೂ ಯುವತಿಯ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ಥ ಯುವಕನ ತಂದೆ ನೀಡಿದ ದೂರಿನಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಡಬ ನಿವಾಸಿ ಪುರುಷೋತ್ತಮ (43) ಹಾಗೂ ಆರ್ಯಾಪು, ಪುತ್ತೂರು ನಿವಾಸಿ ರಾಮಚಂದ್ರ (38) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂತ್ರಸ್ಥ ಯುವಕ ತನ್ನ ಬೈಕ್ ನಲ್ಲಿ ದಿನಾಂಕ: 05-07-2025 ರಂದು ಮಧ್ಯಾಹ್ನ ಸಮಯ, ಆತನ ಪರಿಚಯದ ಯುವತಿಯೊಂದಿಗೆ ಪುತ್ತೂರು ಕಸ್ಬಾ ಗ್ರಾಮದ ಬೀರಮಲೆ ಬೆಟ್ಟ ಎಂಬಲ್ಲಿ ಕುಳಿತುಕೊಂಡಿದ್ದಾಗ, ಇಬ್ಬರು ಅಪರಿಚಿತ ವ್ಯಕ್ತಿಗಳು ಯುವಕ ಹಾಗೂ ಯುವತಿಯನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆಂದು ಬೆದರಿಕೆ ಹಾಕಿರುವುದಲ್ಲದೆ, ಯುವಕನನ್ನು ಅನ್ಯಧರ್ಮದವನೆಂದು ನಿಂದಿಸಿ, ಸ್ಥಳದಲ್ಲಿದ್ದ ಇತರ ಸಾರ್ವಜನಿಕರನ್ನು ಕರೆದು ಅವಮಾನಿಸಿ ವಿಡಿಯೋ ಮಾಡಿರುತ್ತಾರೆ. ಆನಂತರ ಅಪರಿಚಿತ ವ್ಯಕ್ತಿಗಳು ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಮತ್ತು ಇನ್ ಸ್ಟ್ರಾಗ್ರಾಮ್ ನಲ್ಲಿ ಹರಿಯಬಿಟ್ಟು, ಯುವಕ ಅನ್ಯಧರ್ಮದವನೆಂದು ವೀಡಿಯೋದಲ್ಲಿ ಹೇಳಿರುತ್ತಾರೆ ಎಂದು ದೂರಿನಲ್ಲಿ ಯುವಕನ ತಂದೆ ತಿಳಿಸಿದ್ದಾರೆ.
ಇನ್ನು ಈ ಘಟನೆಯ ಮೂಲಕ ಕೋಮು ಸಾಮರಸ್ಯ ಕದಡಲು ಹಾಗೂ ಧರ್ಮಗಳ ನಡುವೆ ದ್ವೇಷ ಉಂಟಾಗಲು ಪ್ರಚೋದನೆ ಮಾಡಿದ ಆರೋಪಿಗಳ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.