ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಜು.5ರಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪತ್ರಿಕೆ ಸಮಾಜಕ್ಕೆ ಸತ್ಯ ವಿಷಯವನ್ನು ತಿಳಿಸಿ ಬೇಕಾಗಿದ್ದು, ಇಂದು ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ಆನೇಕ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳ ನಡುವೆಯೂ ಪತ್ರಿಕೆಗಳು ತನ್ನ ಮೌಲ್ಯ ಹಾಗೂ ಘನತೆಯನ್ನು ಉಳಿಸಿಕೊಂಡರು, ಮುನ್ನಡೆಯುತ್ತಿದೆ. ಆದರೆ ಕೆಲವೊಂದು ಪತ್ರಿಕೆಗಳು ಪತ್ರಿಕಾ ಧರ್ಮ ಬಿಟ್ಟು, ಉದ್ಯಮವಾಗಿ ಜಾಹಿರಾತು ನೀಡಿಲ್ಲ ಎಂದು ಆರ್.ಟಿ.ಐಯಲ್ಲಿ ಅರ್ಜಿ ಕೊಟ್ಟು, ಆರ್.ಟಿ.ಐ ಕಾರ್ಯಕರ್ತರಾಗುತ್ತಿರುವುದು ಸಮಾಜಕ್ಕೆ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ ವಹಿಸಿದ್ದರು.
ಸಮಾರಂಭದಲ್ಲಿ ಜಿತು ನಿಡ್ಲೆ ಅವರನ್ನು ಬೆಳ್ತಂಗಡಿ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು. 2024-25ನೇ ಸಾಲಿನ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಪೈಕಿ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಾದ ಮನಶ್ರೀ ಬದನಾಜೆ, ಅರ್ಮಾನ್ ರಿಯಾಜ್, ಸುಪ್ರೀಯಾ ಎಸ್ ಇವರನ್ನು ಅಭಿನಂದಿಸಲಾಯಿತು. ಪತ್ರಕರ್ತರ ಮನೋಹರ ಬಳಂಜ ಇವರ ಪುತ್ರಿ ದಿತಿ ಹೆಸರಿನಲ್ಲಿ ಅನಾರೋಗ್ಯ ಪೀಡಿತ ವೈದ್ಯಕೀಯ ಚಿಕಿತ್ಸೆಗೆ ನೆರವು ಹಸ್ತಾಂತರಿಸಲಾಯಿತು. ಜಿಲ್ಲಾ ಸಂಘದ ವತಿಯಿಂದ ಪತ್ರಕರ್ತರಾಗಿದ್ದ ದಿ. ಭುವನ್ ಪುದುವೆಟ್ಟು ಅವರ ಕುಟುಂಬಕ್ಕೆ ನೆರವು ಹಸ್ತಾಂತರಿಸಲಾಯಿತು.
ಸಂಘದ ಕಾರ್ಯದರ್ಶಿ ತುಕರಾಮ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪುಷ್ಪರಾಜ ಶೆಟ್ಟಿ, ಬಿ.ಎಸ್ ಕುಲಾಲ್, ಶ್ರೀನಿವಾಸ ತಂತ್ರಿ, ಅರವಿಂದ ಹೆಬ್ಬಾರ್, ಆರ್.ಎನ್ ಪೂವಣಿ, ಚೈತ್ರೇಶ್ ಇಳಂತಿಲ, ಹೃಷಿಕೇಶ್ ಅತಿಥಿಗಳನ್ನು ಗೌರವಿಸಿದರು. ಮನೋಹರ ಬಳಂಜ ಸಂದೇಶ ವಾಚಿಸಿದರು. ಆಚುಶ್ರೀ ಬಾಂಗೇರು ಸನ್ಮಾನಿತರನ್ನು ಪರಿಚರಿಸಿದರು. ದಿತಿ ಸಂತ್ವಾನ ನಿಧಿ ಬಗ್ಗೆ ಆಶ್ರಫ್ ಆಲಿಕುಂಞಿ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ಗಣೇಶ್ ಶಿರ್ಲಾಲು ವಂದಿಸಿದರು. ಸಂಘದ ಜೊತೆ ಕಾರ್ಯದರ್ಶಿ ಧನಕೀರ್ತಿ ಆರಿಗಾ, ಸದಸ್ಯರಾದ ಶಿಬಿ ಧಮ೯ಸ್ಥಳ, ದೀಪಕ್ ಅಠವಳೆ ಸಹಕರಿಸಿದರು.