ನವದೆಹಲಿ : ಮಾರಕ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ 21 ದಿನ ಇಡೀ ದೇಶ ಲಾಕ್ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಬೆನ್ನಲ್ಲೇ ದೇಶಾದ್ಯಂತ ಏ.14ರವರೆಗೆ ರೈಲು ಸಂಚಾರ ಸ್ತಬ್ಧಗೊಂಡಿದೆ. ಈ ಮೊದಲು ಮಾ.31ರವರೆಗೆ ರೈಲ್ವೆ ಇಲಾಖೆ ರೈಲು ಸಂಚಾರ ಸ್ಥಗಿತಗೊಳಿಸಿತ್ತು. ಆದರೆ, ದೇಶವೇ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಏ.14ರವರೆಗ ಈ ಆದೇಶವನ್ನು ವಿಸ್ತರಿಸಿ ಅಧಿಕೃತ ಆದೇಶ ನೀಡಿದೆ.
ಭಾರತದಲ್ಲಿ ಕೊರೋನಾ ವೈರಸ್ ತಡೆಗಟ್ಟಲು ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಷ್ಟಾದರೂ ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಈಗಾಗಲೇ 11 ಜನರು ಸಾವನ್ನಪ್ಪಿದ್ದಾರೆ. ಇನ್ನು 520 ಜನರಿಗೆ ಮಾರಕ ಸೋಂಕು ತಗುಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಈಗಾಗಲೇ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲವು ಸಂಪೂರ್ಣ ಲಾಕ್ ಡೌನ್ ಆಗಿದ್ದು, ಈಗ ರೈಲ್ವೆ ಇಲಾಖೆಯೂ ಏ.14ರವರೆಗೆ ಸಂಪೂರ್ಣ ರೈಲು ಸಂಚಾರ ಸ್ಥಗಿತಗೊಳಿಸಿದೆ.
