ಸುಬ್ರಹ್ಮಣ್ಯ: ಶ್ರೀ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಕ್ತರು ಹೆಚ್ಚು ಭೇಟಿ ನೀಡಲ್ಪಡುವ ಮುಖ್ಯ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕಾಗಿ ಹಾಗು ಭಕ್ತರ ಹಿತದೃಷ್ಟಿಯಿಂದ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಇತ್ಯಾದಿ ಸೇವೆಗಳಿಗೆ ತಲಾ ಇಬ್ಬರಂತೆ ಭಾಗವಹಿಸಿ ಸಹಕರಿಸುವಂತೆ ಶ್ರೀ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಹೊರ ರಾಜ್ಯಗಳ, ಜಿಲ್ಲೆಗಳ ಪ್ರವಾಸಿಗರ ಸಂಖ್ಯೆ ಭಾರೀ ಕಡಿಮೆಯಾಗಿದ್ದು, ಸ್ಥಳೀಯ ವ್ಯಾಪಾರಸ್ಥರು ಸರಿಯಾದ ವ್ಯಾಪಾರ ಇಲ್ಲದೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೊರೊನಾ ವೈರಸ್ ಭೀತಿ ಶುರುವಾಗುವ ಮುಂಚೆ ಈ ಕ್ಷೇತ್ರಕ್ಕೆ ಸ್ಥಳೀಯ ಮತ್ತು ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು.
ಕೊರೊನಾ ಎಫೆಕ್ಟ್ ನಂತರ ಸ್ಥಳೀಯ ಪ್ರವಾಸಿಗರಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾದರೆ, ವಿದೇಶಿ, ಹೊರ ರಾಜ್ಯ ಮತ್ತು ಜಿಲ್ಲೆಗಳ ಪ್ರವಾಸಿಗರ ಆಗಮನದಲ್ಲಿ ಗಣನೀಯ ಇಳಿಕೆಯಾಗಿದೆ. ಇದರಿಂದಾಗಿ ಪ್ರವಾಸಿಗರನ್ನೇ ನಂಬಿಕೊಂಡು ವ್ಯಾಪಾರ ಮಾಡುತ್ತಿದ್ದವರ ಆದಾಯದಲ್ಲಿ ಅರ್ಧಕ್ಕರ್ಧ ಕುಸಿತ ಕಂಡಿದೆ. ಹೀಗಾಗಿ ಕ್ಷೇತ್ರಗಳ ಸುತ್ತಮುತ್ತಲಿನ ವ್ಯಾಪಾರಸ್ಥರು ಬೇಸರಕ್ಕೆ ಒಳಗಾಗಿದ್ದು, ಆದಷ್ಟು ಬೇಗ ವೈದ್ಯರು ಕೊರೊನಾ ಸಮಸ್ಯೆಗೆ ಪರಿಹಾರ ನೀಡಲಿ ಅಂತಿದ್ದಾರೆ.